ವರದೆ ಸಮಸ್ತ ವರದೆ

ವರದೆ ಸಮಸ್ತ ವರದೆ | ಪರಮ ಭಕುತಿಯಿಂದ ತುತಿ |
ಪರನ ಪೊರದೇ

ನೋಡಿದಾಕ್ಷಣದಲ್ಲಿ ಅನಂತ ಜನ್ಮದಿಂದ |
ಮಾಡಿದ ಪಾಪಗಳು ಪರಿದವಯ್ಯ |
ಆಡಲೇನು ತೋಯ ಸ್ಪರ್ಶವಾಗಲು | ನಲಿ |
ದಾಡಿದರು ಗೋತ್ರಜರು ಇವನ ಪುಣ್ಯಕ್ಕೆ ಎಣಿಯೇ ||1||

ಮಿಂದು ಮನಃಪೂರ್ವಕದಿ ಕೊಂಡಾಡಲು ವಳಗೆ |
ಪೊಂದಿದ ದಾಸವರು ಸುಮ್ಮನಹರೋ |
ವೃಂದಾರಕರ ಬಳಗ ಇವನ ಸಾಧನೆ ಮಾಳ್ಪಾ
ನಂದದಲಿ ಇಪ್ಪನೆ ಅಭಿಮೊಗರಾಗಿ||2||

ವರನ ಕೊಡುವೆನೆಂದು ವೈಷ್ಣವ ಮಣಿಯಿಂದ |
ಧರೆಯೊಳಗೆ ಜನಿಸದೆ ಜಗಜ್ಜನನಿ |
ಕರಸಿಕೊಂಡೆ ನೀನು ವರದೆ ವರದೆ ಎಂದು |
ವರವ ಕೊಡು ಎನಗೆ ಸುಜನರು ಮೆಚ್ಚವಂದದಲಿ ||3||

ಇದನೆ ಬೇಡಿಕೊಂಬೆ ಇರಳು ಹಗಲು ನೀನೆ |
ಒದಗಿ ಬಿನ್ನಹ ಮಾಡು ನಿನ್ನ ಪತಿಗೆ |
ಮುದದಿಂದ ಹರಿಯಾಪ್ರವಿಷ್ಠಾಪ್ರವಿಷ್ಠ ಕಥೆ |
ತುದಿನಾಲಿಗೆಯಲ್ಲಿ ಬರಲಿ ಬಣ್ಣಿಸುವಂತೆ ||4||

ಪಾಂಚಜನ್ಯಾದ್ರಿಯಲ್ಲಿ ಉದುಭವಿಸಿ ತುಂಗೆಯೊಳು |
ಪಂಚನದಿ ಸಂಗಮವೆಂದೆನಿಸಿದೆ |
ಪಂಚವಿಂಶತಿ ನಮ್ಮ ವಿಜಯವಿಠ್ಠಲದೇವ |
ಕಾಂಚನದಂತೆ ಪೊಳೆವ ಮೂರ್ತಿ ಮನದೊಳಗಿರಲಿ||5||

Leave a Comment

Your email address will not be published. Required fields are marked *