ಹೂವು ಕಂದಿದಲ್ಲಿ ಪರಿಮಳವನರಸುವರೆ ?

ಹೂವು ಕಂದಿದಲ್ಲಿ ಪರಿಮಳವನರಸುವರೆ ? ಕಂದನಲ್ಲಿ ಕುಂದನರಸುವರೆ ? ಎಲೆ ದೇವ, ಸ್ನೇಹವಿದ್ದ ಠಾವಿನೊಳು ದ್ರೋಹವಾದ ಬಳಿಕ ಮರಳಿ ಸದ್ಗುಣವನರಸುವರೆ ? ಎಲೆ ದೇವ, ಬೆಂದ ಹುಣ್ಣಿಗೆ ಬೇಗೆಯನಿಕ್ಕುವರೆ ? ಕೇಳಯ್ಯಾ, ಶ್ರೀಶೈಲ ಚೆನ್ನಮಲ್ಲಿಕಾರ್ಜುನಾ ಹೊಳೆಯಿಳಿದ ಬಳಿಕ ಅಂಬಿಗಂಗೇನುಂಟು ?

ಹೂವು ಕಂದಿದಲ್ಲಿ ಪರಿಮಳವನರಸುವರೆ ? Read More »

ಹುಟ್ಟಿದೆ ಶ್ರೀಗುರುವಿನ ಹಸ್ತದಲ್ಲಿ,

ಹುಟ್ಟಿದೆ ಶ್ರೀಗುರುವಿನ ಹಸ್ತದಲ್ಲಿ, ಬೆಳೆದೆನು ಅಸಂಖ್ಯಾತರ ಕರುಣದೊಳಗೆ. ಭಾವವೆಂಬ ಹಾಲು, ಸುe್ಞನವೆಂಬ ತುಪ್ಪ, ಪರಮಾರ್ಥವೆಂಬ ಸಕ್ಕರೆಯನಿಕ್ಕಿದರು ನೋಡಾ. ಇಂತಪ್ಪ ತ್ರಿವಿಧಾಮೃತವನು ದಣಿಯಲೆರೆದು ಸಲಹಿದಿರೆನ್ನ. ವಿವಾಹವ ಮಾಡಿದಿರಿ, ಸಯವಪ್ಪ ಗಂಡಂಗೆ ಕೊಟ್ಟಿರಿ, ಕೊಟ್ಟ ಮನೆಗೆ ಕಳುಹಲೆಂದು ಅಸಂಖ್ಯಾತರೆಲ್ಲರೂ ನೆರೆದು ಬಂದಿರಿ. ಬಸವಣ್ಣ ಮೆಚ್ಚಲು ಒಗತನವ ಮಾಡುವೆ. ಚೆನ್ನಮಲ್ಲಿಕಾರ್ಜುನನ ಕೈವಿಡಿದು ನಿಮ್ಮ ತಲೆಗೆ ಹೂವ ತಹೆನಲ್ಲದೆ ಹುಲ್ಲ ತಾರೆನು. ಅವಧರಿಸಿ, ನಿಮ್ಮಡಿಗಳೆಲ್ಲರೂ ಮರಳಿ ಬಿಯಂಗೈವುದು, ಶರಣಾರ್ಥಿ.

ಹುಟ್ಟಿದೆ ಶ್ರೀಗುರುವಿನ ಹಸ್ತದಲ್ಲಿ, Read More »

ಹುಟ್ಟದ ಯೋನಿಯಲ್ಲಿ ಹುಟ್ಟಿಸಿ,

ಹುಟ್ಟದ ಯೋನಿಯಲ್ಲಿ ಹುಟ್ಟಿಸಿ, ಬಾರದ ಭವಂಗಳಲ್ಲಿ ಬರಿಸಿ, ಉಣ್ಣದ ಊಟವನುಣಿಸಿ ವಿಧಿಗೊಳಗಾಗಿಸುವ ಕೇಳಿರಣ್ಣಾ. ತನ್ನವರೆಂದಡೆ ಮನ್ನಿಸುವನೆ ಹತ್ತರಿದ್ದ ಭೃಂಗಿಯ ಚರ್ಮವ ಕಿತ್ತೀಡಾಡಿಸಿದವನು ಮತ್ತೆ ಕೆಲಂಬರ ಬಲ್ಲನೆ? ಇದನರಿತು ಬಿಡದಿರು ಬಿಡದಿರು. ಚೆನ್ನಮಲ್ಲಿಕಾರ್ಜುನನಿಂತಹ ಸಿತಗನವ್ವಾ.

ಹುಟ್ಟದ ಯೋನಿಯಲ್ಲಿ ಹುಟ್ಟಿಸಿ, Read More »

ಹುಟ್ಟು ಹೊರೆಯ ಕಟ್ಟಳೆಯ ಕಳೆದನವ್ವಾ.

ಹುಟ್ಟು ಹೊರೆಯ ಕಟ್ಟಳೆಯ ಕಳೆದನವ್ವಾ. ಹೊನ್ನು ಮಣ್ಣಿನ ಮಾಯೆಯ ಮಾಣಿಸಿದನವ್ವಾ. ಎನ್ನ ತನುವಿನ ಲಜ್ಜೆಯನಿಳುಹಿ, ಎನ್ನ ಮನದ ಕತ್ತಲೆಯ ಕಳೆದ ಚೆನ್ನಮಲ್ಲಿಕಾರ್ಜುನಯ್ಯನೊಳಗಾದವಳ ಏನೆಂದು ನುಡಿಸುವಿರವ್ವಾ ?

ಹುಟ್ಟು ಹೊರೆಯ ಕಟ್ಟಳೆಯ ಕಳೆದನವ್ವಾ. Read More »

ಹಸಿವೆ ನೀನು ನಿಲ್ಲು ನಿಲ್ಲು

ಹಸಿವೆ ನೀನು ನಿಲ್ಲು ನಿಲ್ಲು ತೃಷೆಯೆ ನೀನು ನಿಲ್ಲು ನಿಲ್ಲು ನಿದ್ರೆಯೆ ನೀನು ನಿಲ್ಲು ನಿಲ್ಲು ಕಾಮವೆ ನೀನು ನಿಲ್ಲು ನಿಲ್ಲು ಕ್ರೋಧವೆ ನೀನು ನಿಲ್ಲು ನಿಲ್ಲು ಮೋಹವೆ ನೀನು ನಿಲ್ಲು ನಿಲ್ಲು ಲೋಭವೆ ನೀನು ನಿಲ್ಲು ನಿಲ್ಲು ಮದವೆ ನೀನು ನಿಲ್ಲು ನಿಲ್ಲು ಮಚ್ಚರವೆ ನೀನು ನಿಲ್ಲು ನಿಲ್ಲು ಸಚರಾಚರವೆ ನೀನು ನಿಲ್ಲು ನಿಲ್ಲು ನಾನು ಚೆನ್ನಮಲ್ಲಿಕಾರ್ಜುನದೇವರ ಅವಸರದ ಓಲೆಯನೊಯ್ಯುತ್ತಲಿದ್ದೇನೆ ಶರಣಾರ್ಥಿ.

ಹಸಿವೆ ನೀನು ನಿಲ್ಲು ನಿಲ್ಲು Read More »

ಹಸಿವಾದಡೆ ಊರೊಳಗೆ ಭಿಕ್ಷಾನ್ನಗಳುಂಟು.

ಹಸಿವಾದಡೆ ಊರೊಳಗೆ ಭಿಕ್ಷಾನ್ನಗಳುಂಟು. ತೃಷೆಯಾದಡೆ ಕೆರೆ ಹಳ್ಳ ಬಾವಿಗಳುಂಟು. ಅಂಗಶೀತಕ್ಕೆ ಬೀಸಾಟ ಅರಿವೆಗಳುಂಟು. ಶಯನಕ್ಕೆ ಹಾಳು ದೇಗುಲಗಳುಂಟು. ಚೆನ್ನಮಲ್ಲಿಕಾರ್ಜುನಯ್ಯಾ, ಆತ್ಮಸಂಗಾತಕ್ಕೆ ನೀನೆನಗುಂಟು.

ಹಸಿವಾದಡೆ ಊರೊಳಗೆ ಭಿಕ್ಷಾನ್ನಗಳುಂಟು. Read More »

ಹಸಿವು ತೃಷೆಯಾದಿಗಳು ಎನ್ನೊಳಗಾದ ಬಳಿಕ,

ಹಸಿವು ತೃಷೆಯಾದಿಗಳು ಎನ್ನೊಳಗಾದ ಬಳಿಕ, ವಿಷಯ ವಿಕಾರವೆನ್ನನಿರಿಸಿ ಹೋದವು ಕಾಣಾ ತಂದೆ. ಅದೇ ಕಾರಣ ನೀವು ಅರಸಿಕೊಂಡು ಬಂದಿರಣ್ಣ. ನೀವು ಅರಸುವ ಅರಕೆ – ಎನ್ನೊಳಗಾಯಿತ್ತು. ಎನ್ನ ದೇವ ಚೆನ್ನಮಲ್ಲಿಕಾರ್ಜುನ ತನ್ನೊಳಗೆನ್ನನಿಂಬಿಟ್ಟುಕೊಂಡನಾಗಿ ಇನ್ನು ನಿನ್ನ ತಂದೆ ತಾಯಿತನವನೊಲ್ಲೆ ನಾನು.

ಹಸಿವು ತೃಷೆಯಾದಿಗಳು ಎನ್ನೊಳಗಾದ ಬಳಿಕ, Read More »

ಹಸೆ ಹಂದರವನಿಕ್ಕಿ, ತೊಂಡಿಲ ಬಾಸಿಗವ ಕಟ್ಟಿ,

ಹಸೆ ಹಂದರವನಿಕ್ಕಿ, ತೊಂಡಿಲ ಬಾಸಿಗವ ಕಟ್ಟಿ, ಮದುವೆಯಾದೆನಲ್ಲಾ ನಾನು ಮಚ್ಚಿ ಮದುವೆಯಾದೆನಲ್ಲಾ ನಾನು. ಗಂಡನೆ, ನಿನಗೋತು ಕೈವಿಡಿದವಳನು ಮತ್ತೊಬ್ಬರು ಕೈವಿಡಿದರೆ ನಿನ್ನಭಿಮಾನವ ಪರರೆಳದೊಯಿದಂತೆ ಕಾಣಾ ಚೆನ್ನಮಲ್ಲಿಕಾರ್ಜುನಾ.

ಹಸೆ ಹಂದರವನಿಕ್ಕಿ, ತೊಂಡಿಲ ಬಾಸಿಗವ ಕಟ್ಟಿ, Read More »

ಹಣ್ಣ ಮೆದ್ದ ಬಳಿಕ ಆ ಮರನನಾರು ತರಿದಡೇನು ?

ಹಣ್ಣ ಮೆದ್ದ ಬಳಿಕ ಆ ಮರನನಾರು ತರಿದಡೇನು ? ಹೆಣ್ಣ ಬಿಟ್ಟ ಬಳಿಕ ಆಕೆಯನಾರು ಕೂಡಿದಡೇನು ? ಮಣ್ಣ ಬಿಟ್ಟ ಬಳಿಕ ಆ ಕೆಯ್ಯನಾರು ಉತ್ತಡೇನು ? ಚೆನ್ನ ಮಲ್ಲಿಕಾರ್ಜುನನರಿಯದ ಬಳಿಕ ಆ ಕಾಯವ ನಾಯಿ ತಿಂದಡೇನು, ನೀರು ಕುಡಿದಡೇನು?

ಹಣ್ಣ ಮೆದ್ದ ಬಳಿಕ ಆ ಮರನನಾರು ತರಿದಡೇನು ? Read More »

ಹರಿಯ ನುಂಗಿತ್ತು ಮಾಯೆ,

ಹರಿಯ ನುಂಗಿತ್ತು ಮಾಯೆ, ಅಜನ ನುಂಗಿತ್ತು ಮಾಯೆ ಇಂದ್ರನ ನುಂಗಿತ್ತು ಮಾಯೆ, ಚಂದ್ರನ ನುಂಗಿತ್ತು ಮಾಯೆ ಬಲ್ಲೆನೆಂಬ ಬಲುಗೈಯರ ನುಂಗಿತ್ತು ಮಾಯೆ, ಅರಿಯೆನೆಂಬ ಅe್ಞನಿಗಳ ನುಂಗಿತ್ತು ಮಾಯೆ, ಈರೇಳುಭುವನವನಾರಡಿಗೊಂಡಿತ್ತು ಮಾಯೆ, ಚೆನ್ನಮಲ್ಲಿಕಾರ್ಜುನಯ್ಯಾ, ಎನ್ನ ಮಾಯವ ಮಾಣಿಸಾ ಕರುಣಿ.

ಹರಿಯ ನುಂಗಿತ್ತು ಮಾಯೆ, Read More »

ಹರನೆ ನೀನೆನಗೆ ಗಂಡನಾಗಬೇಕೆಂದು

ಹರನೆ ನೀನೆನಗೆ ಗಂಡನಾಗಬೇಕೆಂದು ಅನಂತಕಾಲ ತಪಸ್ಸಿದ್ದೆ ನೋಡಾ. ಹಸೆಯಮೇಲಣ ಮಾತ ಬೆಸಗೊಳಲಟ್ಟಿದಡೆ, ಶಶಿಧರನ ಹತ್ತಿರಕೆ ಕಳುಹಿದರೆಮ್ಮವರು. ಭಸ್ಮವನೆ ಹೂಸಿ, ಕಂಕಣವನೆ ಕಟ್ಟಿದರು ಚೆನ್ನಮಲ್ಲಿಕಾರ್ಜುನ ತನಗೆ ನಾನಾಗಬೇಕೆಂದ.

ಹರನೆ ನೀನೆನಗೆ ಗಂಡನಾಗಬೇಕೆಂದು Read More »

ಹಗಲಿನ ಕೂಟಕ್ಕೆ ಹೋರಿ ಬೆಂಡಾದೆ ;

ಹಗಲಿನ ಕೂಟಕ್ಕೆ ಹೋರಿ ಬೆಂಡಾದೆ ; ಇರುಳಿನ ಕೂಟದಲ್ಲಿ ಇಂಬರಿದು ಹತ್ತಿದೆ. ಕನಸಿನಲ್ಲಿ ಮನಸಂಗವಾಗಿ ಮೈಮರೆದಿರ್ದೆ ; ಮನಸ್ಸಿನಲ್ಲಿ ಮೈಮರೆದು ಒರಗಿದೆ. ಚೆನ್ನಮಲ್ಲಿಕಾರ್ಜುನನ ಕಂಡು ಕಣ್ದೆರೆದೆ.

ಹಗಲಿನ ಕೂಟಕ್ಕೆ ಹೋರಿ ಬೆಂಡಾದೆ ; Read More »

ಹಗಲೆನ್ನೆ ಇರುಳೆನ್ನೆ ಉದಯವೆನ್ನೆ ಅಸ್ತಮಾನವೆನ್ನೆ ;

ಹಗಲೆನ್ನೆ ಇರುಳೆನ್ನೆ ಉದಯವೆನ್ನೆ ಅಸ್ತಮಾನವೆನ್ನೆ ; ಹಿಂದೆನ್ನ ಮುಂದೆನ್ನ, ನೀನಲ್ಲದೆ ಪೆರತೊಂದಹುದೆನ್ನೆ. ಮನ ಘನವಾದುದಿಲ್ಲವಯ್ಯಾ. ಕತ್ತಲೆಯಲ್ಲಿ ಕನ್ನಡಿಯ ನೋಡಿ ಕಳವಳಗೊಂಡೆನಯ್ಯಾ. ನಿಮ್ಮ ಶರಣ ಬಸವಣ್ಣನ ತೇಜದೊಳಗಲ್ಲದೆ ಆನಿನ್ನೆಂದು ಕಾಂಬೆನು ಹೇಳಾ, ಚೆನ್ನಮಲ್ಲಿಕಾರ್ಜುನಾ.

ಹಗಲೆನ್ನೆ ಇರುಳೆನ್ನೆ ಉದಯವೆನ್ನೆ ಅಸ್ತಮಾನವೆನ್ನೆ ; Read More »

ಹಗಲು ನಾಲ್ಕುಜಾವ ನಿಮ್ಮ ಕಳವಳದಲ್ಲಿಪ್ಪೆನು.

ಹಗಲು ನಾಲ್ಕುಜಾವ ನಿಮ್ಮ ಕಳವಳದಲ್ಲಿಪ್ಪೆನು. ಇರುಳು ನಾಲ್ಕುಜಾವ ಲಿಂಗದ ವಿಕಳಾವಸ್ಥೆಯಲ್ಲಿಪ್ಪೆನು. ಹಗಲಿರುಳು ನಿಮ್ಮ ಹಂಬಲದಲ್ಲಿ ಮೈಮರೆದೊರಗಿಪ್ಪೆನು. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಒಲುಮೆ ನಟ್ಟು ಹಸಿವು ತೃಷೆ ನಿದ್ರೆಯ ತೊರೆದೆನಯ್ಯಾ

ಹಗಲು ನಾಲ್ಕುಜಾವ ನಿಮ್ಮ ಕಳವಳದಲ್ಲಿಪ್ಪೆನು. Read More »

ಹಗಲು ನಾಲ್ಕುಜಾವ ಅಶನಕ್ಕೆ ಕುದಿವರು.

ಹಗಲು ನಾಲ್ಕುಜಾವ ಅಶನಕ್ಕೆ ಕುದಿವರು. ಇರುಳು ನಾಲ್ಕುಜಾವ ವ್ಯಸನಕ್ಕೆ ಕುದಿವರು. ಅಗಸ ನೀರೊಳಗಿರ್ದು ಬಾಯಾರಿ ಸತ್ತಂತೆ, ತಮ್ಮೊಳಗಿರ್ದ ಮಹಾಘನವನರಿಯರು ಚೆನ್ನಮಲ್ಲಿಕಾರ್ಜುನಾ

ಹಗಲು ನಾಲ್ಕುಜಾವ ಅಶನಕ್ಕೆ ಕುದಿವರು. Read More »

ಸೆಜ್ಜೆಯನುಪ್ಪರಿಸಿ ಶಿವಲಿಂಗ ಕರಸ್ಥಲಕ್ಕೆ ಬರಲು,

ಸೆಜ್ಜೆಯನುಪ್ಪರಿಸಿ ಶಿವಲಿಂಗ ಕರಸ್ಥಲಕ್ಕೆ ಬರಲು, ಪ್ರಜ್ವಲಿಸಿ ತೊಳತೊಳಗಿ ಬೆಳಗುತ್ತಿಹ ಕಾಂತಿಯೊಳು ಪ್ರಜ್ವಲಿಸಿ, ದೃಷ್ಟಿನಟ್ಟು ಒಜ್ಜರಿಸಿ ಸುರಿವ ಅಶ್ರುಜಲ ಶಿವಸುಖ ಸಾರಾಯನಲ್ಲಿ ಸಜ್ಜನಸತಿಯ ರತಿಯೊಡಗೂಡಿ ಲಜ್ಜೆಗೆಟ್ಟು ನಿಮ್ಮ ನೆರೆದೆನು ಚೆನ್ನಮಲ್ಲಿಕಾರ್ಜುನಾ.

ಸೆಜ್ಜೆಯನುಪ್ಪರಿಸಿ ಶಿವಲಿಂಗ ಕರಸ್ಥಲಕ್ಕೆ ಬರಲು, Read More »

ಸ್ಥಾನಭೇದ ಸಂಶಯ

ಸ್ಥಾನಭೇದ ಸಂಶಯ ಆಧಾರ ಸ್ವಾದಿಷ್ಟ ಮಣಿಪೂರಕ ಅನಾಹತ ವಿಶುದ್ಧಿ ಎಂಬ ಷಟ್‍ಚಕ್ರಂಗಳ ವರ್ತನೆಯ ನುಡಿದಡೇನು ? ಆದಿ ಅನಾದಿಯ ಕೇಳಿದಡೇನು ? ತನ್ನಲ್ಲಿದ್ದುದ ತಾನರಿಯದನ್ನಕ್ಕ ಉನ್ಮನಿಯ ರಭಸದ ಸಿಂಹಾಸನದ ಮೇಲೆ ಚೆನ್ನಮಲ್ಲಿಕಾರ್ಜುನನ ಭೇದಿಸಲರಿಯರು.

ಸ್ಥಾನಭೇದ ಸಂಶಯ Read More »

ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ನಾನೊಲಿದೆ.

ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ನಾನೊಲಿದೆ. ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ ಚೆಲುವಂಗೆ ನಾನೊಲಿದೆ ಎಲೆ ಅವ್ವಗಳಿರಾ ? ಭವವಿಲ್ಲದ ಭಯವಿಲ್ಲದ ನಿರ್ಭಯ ಚೆಲುವಂಗೊಲಿದೆ ನಾನು. ಸೀಮೆಯಿಲ್ಲದ ನಿಸ್ಸೀಮಂಗೊಲಿದೆ ನಾನು. ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆ ಮಿಗೆ ಮಿಗೆ ಒಲಿದೆ ಎಲೆ ಅವ್ವಗಳಿರಾ.

ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ನಾನೊಲಿದೆ. Read More »

ಸಾವಿರ ಹೊನ್ನಿಂಗೆ ಸಾದಕೊಂಡು

ಸಾವಿರ ಹೊನ್ನಿಂಗೆ ಸಾದಕೊಂಡು ಸುಣ್ಣವ ಬೆರಸಿದಂತೆ ಮಾಡಿದೆಯಯ್ಯಾ. ಮೂರು ಲಕ್ಷದ ಬೆಲೆಗೆ ರತ್ನವ ಕೊಂಡು ಮಡುವಿನಲ್ಲಿ ಇಟ್ಟಂತೆ ಮಾಡಿದೆಯಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ಎನ್ನ ಮುಟ್ಟಿ ಪಾವನವ ಮಾಡಿ ಕಷ್ಟಸಂಸಾರಿಗೊಪ್ಪಿಸುವಂತೆ ಮಾಡಿದೆಯಯ್ಯಾ.

ಸಾವಿರ ಹೊನ್ನಿಂಗೆ ಸಾದಕೊಂಡು Read More »

ಸೂರ್ಯಪ್ರಕಾಶ ಆಕಾಶದ ವಿಸ್ತೀರ್ಣ,

ಸೂರ್ಯಪ್ರಕಾಶ ಆಕಾಶದ ವಿಸ್ತೀರ್ಣ, ವಾಯುವಿನ ಚಲನೆಯೆಲ್ಲಾ ಹಗಲಿನ ಪೂಜೆ. ಚಂದ್ರಪ್ರಕಾಶ ನಕ್ಷತ್ರ ಅಗ್ನಿವಿದ್ಯುತ್ತಾದಿ ದೀಪ್ತಿಮಯವೆನಿಸಿಪ್ಪವೆಲ್ಲಾ ಇರುಳಿನ ಪೂಜೆ. ನಿನ್ನ ಪ್ರಕಾಶದಲ್ಲಿ ಎನ್ನ ಮರದಿಪ್ಪೆನಯ್ಯಾ ಚೆನ್ನಮಲ್ಲಿಕಾರ್ಜುನಾ.

ಸೂರ್ಯಪ್ರಕಾಶ ಆಕಾಶದ ವಿಸ್ತೀರ್ಣ, Read More »

ಸುಟ್ಟ ಬೂದಿಯೊಳಗೊಂದು ಸುಡದ ಬೂದಿಯ ಕಂಡೆ,

ಸುಟ್ಟ ಬೂದಿಯೊಳಗೊಂದು ಸುಡದ ಬೂದಿಯ ಕಂಡೆ, ಆ ಸುಡದ ಬೂದಿಯ ಬೆಟ್ಟವ ಮಾಡಿದಾತನ ಗುಟ್ಟನಾರು ಕಂಡುದಿಲ್ಲ. ನಾನು ಆತನನರಿದು ಶರಣೆಂದು ಬದುಕಿದೆ. ಆ ಬೆಟ್ಟದ ಮೇಲೆ ಅನೇಕ ವಸ್ತುಗಳ ಕಂಡು ಚರಿಸುತ್ತಿದ್ದೇನೆ ಚೆನ್ನಮಲ್ಲಿಕಾರ್ಜುನಾ.

ಸುಟ್ಟ ಬೂದಿಯೊಳಗೊಂದು ಸುಡದ ಬೂದಿಯ ಕಂಡೆ, Read More »

ಸುಖದ ಸುಖಿಗಳ ಸಂಭಾಷಣೆಯಿಂದ

ಸುಖದ ಸುಖಿಗಳ ಸಂಭಾಷಣೆಯಿಂದ ದುಃಖಕ್ಕೆ ವಿಶ್ರಾಮವಾಯಿತ್ತು. ಭಾವಕ್ಕೆ ತಾರ್ಕಣೆಯಾದಲ್ಲಿ, ನೆನಹಕ್ಕೆ ವಿಶಾಮವಾಯಿತ್ತು. ಬೆಚ್ಚು ಬೆರಸಲೊಡನೆ ಮಚ್ಚು ಒಳಕೊಂಡಿತ್ತಯ್ಯಾ, ಚೆನ್ನಮಲ್ಲಿಕಾರ್ಜುನಯ್ಯಾ ನಿಮ್ಮ ಶರಣರ ಸಂಗದಿಂದ.

ಸುಖದ ಸುಖಿಗಳ ಸಂಭಾಷಣೆಯಿಂದ Read More »

ಸರ್ಪನ ಬಾಯ ಕಪ್ಪೆ ನೊಣಕ್ಕೆ ಹಾರುವಂತೆ

ಸರ್ಪನ ಬಾಯ ಕಪ್ಪೆ ನೊಣಕ್ಕೆ ಹಾರುವಂತೆ ಆಪ್ಯಾಯನ ಬಿಡದು. ಕಾಯವರ್ಪಿತವೆಂಬ ಹುಸಿಯ ನೋಡಾ. ನಾನು ಭಕ್ತಳೆಂಬ ನಾಚಿಕೆಯ ನೋಡಾ. ನಾನು ಯುಕ್ತಳೆಂಬ ಹೇಸಿಕೆಯ ನೋಡಾ. ಓಗರವಿನ್ನಾಗದು, ಪ್ರಸಾದ ಮುನ್ನಿಲ್ಲ ; ಚೆನ್ನಮಲ್ಲಿಕಾರ್ಜುನಯ್ಯ ಉಪಚಾರದರ್ಪಿತವನವಗಡಿಸಿ ಕಳೆವ

ಸರ್ಪನ ಬಾಯ ಕಪ್ಪೆ ನೊಣಕ್ಕೆ ಹಾರುವಂತೆ Read More »

ಸಪ್ತಧಾತುಗಳಿಂದ ಬಳಸಲ್ಪಟ್ಟ ಈ ಶರೀರವೆ

ಸಪ್ತಧಾತುಗಳಿಂದ ಬಳಸಲ್ಪಟ್ಟ ಈ ಶರೀರವೆ ಶಿವನ ಪಟ್ಟಣವೆಂದು ಹೇಳಲ್ಪಟ್ಟಿತ್ತು. ಈ ಪಿಂಡವೆಂಬ ಪಟ್ಟಣದಲ್ಲಿ ಸೂಕ್ಷ್ಮವಾದಂಥಧಾರಾಕಾಶದಿಂದ ಮನೋಹರವಾಗಿದ್ದ ಹೃದಯಕಮಲವೆ ಅಂತಃಪುರವು. ಅಲ್ಲಿ ನಿತ್ಯಪರಿಪೂರ್ಣತ್ವದಿಂದ ಸಿದ್ಧನಾಗಿ ಸಚ್ಚಿದಾನಂದವೇ ಕುರುಹಾಗುಳ್ಳ ಪರಮಶಿವನು ಜಲದಲ್ಲಿ ತೋರುತ್ತಿರ್ದ ಆಕಾಶದೋಪಾದಿಯಲ್ಲಿ ಪ್ರತ್ಯಕ್ಷವಾಗಿ ಪ್ರಕಾಶವೇ ಸ್ವರೂಪವಾಗುಳ್ಳಾತನಾಗಿ ಇರುತಿರ್ದನು. ಆ ಜಲಮಧ್ಯದಲ್ಲಿಯ ಆಕಾಶ ಬಿಂಬದಲ್ಲಿರುತಿರ್ದ ಘಟಾಕಾಶದೋಪಾದಿಯಲ್ಲಿ ಖಂಡಿತನಾಗಿರ್ದ ಚಿದ್ರೂಪನಾದ ಶಿವನನು ಭಾವಿಸುವುದಯ್ಯ ಶ್ರೀ ಚೆನ್ನಮಲ್ಲಿಕಾರ್ಜುನದೇವಾ.

ಸಪ್ತಧಾತುಗಳಿಂದ ಬಳಸಲ್ಪಟ್ಟ ಈ ಶರೀರವೆ Read More »

ಸದ್ಗುರು ಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ

ಸದ್ಗುರು ಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ ತಚ್ಫಿಷ್ಯನ ಮಸ್ತಕದ ಮೇಲೆ ತನ್ನ ಹಸ್ತವನಿರಿಸಿದಡೆ ಲೋಹದ ಮೇಲೆ ಪರುಷ ಬಿದ್ದಂತಾಯಿತ್ತಯ್ಯಾ. ಒಪ್ಪುವ ಶ್ರೀ ವಿಭೂತಿಯ ನೊಸಲಿಂಗೆ ಪಟ್ಟವಕಟ್ಟಿದಡೆ ಮುಕ್ತಿರಾಜ್ಯದ ಒಡೆತನಕ್ಕೆ ಪಟ್ಟವಕಟ್ಟಿದಂತಾಯಿತ್ತಯ್ಯಾ. ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನವೆಂಬ ಪಂಚಕಳಶದಭಿಷೇಕವ ಮಾಡಿಸಲು, ಶಿವನ ಕರುಣಾಮೃತದ ಸೋನೆ ಸುರಿದಂತಾಯಿತ್ತಯ್ಯಾ. ನೆರೆದ ಶಿವಗಣಂಗಳ ಮಧ್ಯದಲ್ಲಿ ಮಹಾಲಿಂಗವನು ಕರತಳಾಮಳಕವಾಗಿ ಶಿಷ್ಯನ ಕರಸ್ಥಲಕ್ಕೆ ಇತ್ತು, ಅಂಗದಲ್ಲಿ ಪ್ರತಿಷ್ಠಿಸಿ, ಪ್ರಣವಪಂಚಾಕ್ಷರಿಯುಪದೇಶವ ಕರ್ಣದಲ್ಲಿ ಹೇಳಿ, ಕಂಕಣವ ಕಟ್ಟಿದಲ್ಲಿ, ಕಾಯವೆ ಕೈಲಾಸವಾಯಿತ್ತು ; ಪ್ರಾಣವೆ ಪಂಚಬ್ರಹ್ಮಮಯಲಿಂಗವಾಯಿತ್ತು. ಇಂತು ಮುಂದ

ಸದ್ಗುರು ಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ Read More »