ಬಾ ಶ್ರೀಗುರುದೇವನೆ ಬಾ|
ಶ್ಯಾಮಲ ಕಾನನ ಶೃಂಗ ತರಂಗಿತ
ಸಹ್ಯಾದ್ರಿಯ ಸುಂದರ ಮಂದಿರಕೆ
ಚನ್ಮಯ ಮಮ ಹೃನ್ಮಂದಿರಕೆ||
ವಂಗಮಾತೆಯಲಿ ಜನ್ಮವನೆತ್ತಿ
ದಿವ್ಯಸಮನ್ವಯ ಧರ್ಮವ ಬಿತ್ತಿ
ಮತಭೇದದ ವಿಷವನು ಹೋಗಾಡಿ
ಲೋಕದ ದೃಷ್ಟಿಗೆ ಸಮತೆಯ ನೀಡಿ
ಕಾಪಾಡಿದ ಪಾವನ ಮೂರುತಿಯೇ||
ಹೇ ನವಯುಗದವತಾರ
ಪೂರ್ವದಿಗಂತದಿ ಕಾಂತಿಯು ಮೂಡಿ
ನಾಡಿನ ಕತ್ತಲೆಯನು ಹೋಗಾಡಿ
ಮೈದೋರುವ ತೆರದಲಿ ನೀನಿಂದು
ನಮ್ಮೀ ವನಗೃಹಕೈತಂದು
ನಮ್ಮೆದೆಗತ್ತಲ ಪರಿಹರಿಸಿ
ಸುಖಶಾಂತಿಯ ಕಾಂತಿಯ ಬರಿಸಿ
ಕೃಪೆಗೈ, ಓ ಮಮ ದೀನಬಂಧು||
—-ಕುವೆಂಪು