ಹರಿಮಣಿವರ್ಣ ವಿಠ್ಠಲಾ ನಿನ್ನವನೊ
ಪರಮ ಪ್ರೀತಿಯಿಂದ ಪಾಲಿಸ ಬಾರಯ್ಯ
ಹೃದಯ ಪಂಕಜ ದಳ ಕೂಡಿತು ನೋಡು
ಮುದರಿಕೊಂಡವು ಕುಮುದವೆಂಬೊ ಕಣ್ಣು
ಪದುಮನಾಭನೆ ನಿನ್ನ ನಖವೆಂಬೊ ರವಿ
ವದನವೆಂಬೊ ಚಂದ್ರಮಾ ಉದಿಸಲಿ ||1||
ಬಿರಿದಾಗಿ ಕಿವಿ ಎಂಬೊ ಮನೆ ಇಪ್ಪವು
ಸ್ಪರಿಶ ಮಾಡುವೆನೆಂದು ಕಲಿ ಸುಳಿದಾ
ಹರಿ ನಿನ್ನ ಗೆಜ್ಜೆ ಧ್ವನಿಯಿಂದ ಕರ್ಣ ಮಂದಿರವೆ ತುಂಬಲಿ
ಕಲಿ ಅಡಗಿ ಪೋಪಾ ||2||
ನಾಸಾ ದುರ್ವಾಸನೆಗೆ ಇಚ್ಛೆ ಮಾಡಿತು
ಹೇಸಿಗೆ ರಸಗಳಿಗೆ ಜಿವ್ವೆ ಪೋಗುದದು
ಪೂಸಿದಾ ಗಂಧ ದಿವ್ಯವಾಸನೆ ಬರಲಿ
ಲೇಸು ನಿನ್ನ ನಾಮರಸ ಸುರಿಸುವಂತೆ ಮಾಡು||3||
ನೀನಲ್ಲದೆ ತುಲಾ ಕಾವೇರಿಯೊಳಗೆ
ಸ್ನಾನ ಜಪ ತಪಗಳು ಮಾಡುವದೇಕೆ
ಕಾಣದಿರೆ ನಿನ್ನ ಚರಣ ಸಿರಿ ಪ್ರಾಣರಿಗೆ
ಪ್ರಾಣನಾದ ಬಲು ಮೋಹನಾ ||4||
ಈ ಕ್ರೋಧನಾಬ್ಧ್ದ ಆಶ್ವಿಜ ನಿನ್ನ ಪಕ್ಷದ
ಏಕಾದಶಿ ರಾತ್ರಿಯೊಳು ಬಾ ಹೃದಯದೊಳಗೆ
ಯಾಕೆ ಕೂಡದಯ್ಯ ಜೀಯಾ ಪೇಳೊ ಎನ್ನೊಡಿಯ
ಲೋಕ ಚರಿಸುವದೇನು ನಿನ್ನ ಪೋಗಾಡಿ ||5||
ಧವಳಗಂಗಿಯೊಳಂದು ಬಿದ್ದು ಬಂದಾಗ
ಕವಿ ವಾದಿರಾಜಗೊಲಿದು ಬರಲಿಲ್ಲವೇ
ಅವರ ದಾಸಾನುದಾಸನು ಸತತ ನಾನು
ತವಕದಿಂದಲಿ ಬಾರೊ ಭಕ್ತವತ್ಸಲಾ||6||
ಅರ್ಚಿಸಬಲ್ಲನೆ ದೇವ ನಿನ್ನನುದಿನಾ
ಗಚ್ಚರಿತವಂದಲ್ಲವೆ ಮತ್ತಾವದರಿಯೆ
ಅಚ್ಯುತದಾಸರ ಪ್ರೀಯ ವಿಜಯವಿಠ್ಠಲ
ಬೆಚ್ಚಿಸಿದೋಪಾದಿಯಲ್ಲಿ ಪೊಂದಿ ಬಾರಯ್ಯ ||7||