ಶ್ರೀಪತಿಯು ನಮಗೆ ಸಂಪದವೀಯಲಿ
ವಾಣೀಪತಿಯು ನಮಗೆ ದೀರ್ಘಾಯು ಕೊಡಲಿ||
ವರವಿಬುಧರನು ಪೊರೆಯೆ ವಿಷವ ಕಂಠದಲಿಟ್ಟ
ಹರ ನಿತ್ಯ ನಮಗೆ ರಕ್ಷಣೆ ನೀಡಲಿ|
ನರರೊಳುನ್ನತವಾದ ನಿತ್ಯ ಭೋಗಂಗಳನು
ಪುರಹೂತ ದಯದಿಂದ ಪೂರ್ಣಮಾಡಿಸಲಿ||
ವಿನುತಸಿದ್ಧಿಪ್ರದನು ವಿಘ್ನೇಶ ದಯದಿಂದ
ನೆನೆದ ಕಾರ್ಯಗಳ ನೆರೆವೇರಿಸಲಿ ಹರಸಿ|
ದಿನದಿನವು ಧನ್ವಂತ್ರಿಯಾಪತ್ತುಗಳ ಕಳೆದು
ಮನಹರುಷವಿತ್ತು ಮನ್ನಿಸಲಿ ಬಿಡದೆ||
ನಿರುತ ಸುಜ್ಞಾನವನು ಬೆಳಗಿ ಕೃಪೆಗೈಯುವ
ಗುರುಗಳಾಶೀರ್ವಾದ ನಮಗಾಗಲಿ|
ಪುರಂದರವಿಟ್ಠಲನ ಕರುಣದಿಂದಲಿ ಸಕಲ
ಸುರರೊಲುಮೆ ನಮಗೆ ಸುಸ್ಥಿರವಾಗಲಿ||
—-ಪುರಂದರದಾಸ