ಶರಣು ಶರಣು ಸಂಬುದ್ಧ ಗುರು ಜ್ಞಾನ-
ದಯಾಸಮುದ್ರನೆ ಬುದ್ಧ ಗುರು|
ಲೋಕನಾಥಸಂಬುದ್ಧ ಗುರು ಆರ್ತ್ತ-
ತ್ರಾಣಪರಾಯಣ ಬುದ್ಧ ಗುರು
ಶರಣು ಶರಣು ಸಂಬುದ್ಧ ಗುರು||
ದೇಶ ಕೋಶಮನೆ ತಂದೆ ಮಡದಿ ಮಗು
ಸಕಲ ಸುಖದ ಸವಿ ಪರಿವಾರ
ಕಹಿಯೊ ಎಂಬವೊಲು ಕೊಡವಿಕೊಂಡು ನಡು-
ರಾತ್ರಿಯೊಳಡವಿಗೆ ನಡೆದೆ ಗುರು||
ಆರುವರುಷದಲೆದಾಟವು ಘೋರ
ಕಡೆಗು ಗೆದ್ದೆ ನೀ ಜಿತಮಾರ
ಬೋಧಿವೃಕ್ಷದಡಿ ಪ್ರಜ್ಞಾಯುಧದಲಿ
ಮಾರಸೇನೆಯನು ಮುರಿದೆ ಗುರು||
ಗೆದ್ದು ಬಂದು ನೀ ವಾರಾಣಸಿಯಲಿ
ಅಮೃತ ದುಂದುಭಿಯ ಬಾರಿಸಿದೆ
ಧರ್ಮಚಕ್ರವನು ಸ್ಥಾಪಿಸತೊಡಗಿದೆ
ಜಗಗಳ ಹಿತ ಸುಖಕಾಗಿ ಗುರು||
ದಯೆಯೆ ಮೂಲವೈ ಸರ್ವಧರ್ಮಕೂ
ಶೀಲವೆ ಜೀವನಕಡಿಪಾಯ
ಶೀಲವಿಲ್ಲದವಗಾಗದು ಪ್ರಜ್ಞೆ
ಜೋಕೆ ಜೋಕೆ ಎಂದೊರೆದೆ ಗುರು||
ಹೊಸದು ಹೇಳಲಿಕೆ ಬಂದವನಲ್ಲ
ಹೊಸದು ಲೋಕದೊಳಗೇನುಂಟು
ಸತ್ಯಪುರಾತನ ಸತ್ಯವೆ ನೂತನ
ಸತ್ಯ ಚಿರಂತನ ಎಂದೆ ಗುರು||
—-ಜಿ.ಪಿ.ರಾಜರತ್ನಂ