ಶಕ್ತನಾದರೆ

ಶಕ್ತನಾದರೆ ನೆಂಟರೆಲ್ಲ ಹಿತರು| ಅ-
ಶಕ್ತನಾದರೆ ಅವರೆ ವೈರಿಗಳು ಲೋಕದಲಿ||

ಕಮಲ ಅರ್ಕನಲಿರುವ ಕಡು ನೆಂಟತನದಿಂದ
ವಿಮಲ ಜಲದೊಳಗೆ ಅದು ಆಡುತಿಹುದು|
ಕ್ರಮಗೆಟ್ಟು ನೀರಿಂದ ತಡಿಗೆ ಬೀಳಲು ರವಿಯ
ಅಮಿತ ಕಿರಣಗಳಿಂದ ಕಂದಿಹೋಗುವುದು||

ವನಸುತ್ತಿ ಸುಡುವಾಗ ವಾಯು ಬೀಸಲು ಉರಿಯು
ಘನ ಪ್ರಜ್ವಲಿಸುತಿಹುದು ಗಗನಕಡರಿ|
ಮನೆಯೊಳಿಹ ದೀಪಕ್ಕೆ ಮಾರುತನು ಸೋಂಕಿದರು
ಘನಶಕ್ತಿಯುಡುಗಿ ತಾ ನಂದಿಹೋಗುವುದು||

ಕರಿಯ ಕಾಯಿದ ಹರಿಯ ಕರುಣತಪ್ಪಿದ ಮೇಲೆ
ಮರೆಯ ಹೊಕ್ಕರು ಕಾವ ಮಹಿತರಾರಯ್ಯ|
ವರದ ಶ್ರೀ ಪುರಂದರವಿಟ್ಠಲನು ಒಲಿದಿರಲು
ಸರುವ ಜನರೆಲ್ಲ ಮೂಜಗದಿ ಹಿತರು||

—-ಪುರಂದರದಾಸ

1 thought on “ಶಕ್ತನಾದರೆ”

Leave a Comment

Your email address will not be published. Required fields are marked *