ವ್ಯರ್ಥ ಕೆಟ್ಟರು ಯಿಂದು ನರಮನುಜರು
ಸಾರ್ಥಕ ಮಾಡಿಕೊಳ್ಳರು ಶರೀರವುಳ್ಳವರು
ನಿದ್ರೆಯೊಳಗಿದ್ದು ಪ್ರಪಂಚ ಮರುಳಾಟ ಪರ
ಬುದ್ಧಿಯೊಳು ಮುಳುಗಿ ವಿಷಯವ ಭೋಗಿಸಿ
ಮದ್ದು ತಿಂದಂತೆ ಇದ್ದಾದರು ಉದಯದಲಿ
ಎದ್ದು ಕುಳಿತು ಒಮ್ಮೆ ಹರಿಯಂದು ನುಡಿಯದೆ ||1||
ಹರಿವ ಜಲವ ಮಿಂದು ಹರಿಗೆ ಅರ್ಪಿಸುತೇವೆಂದು
ಬರಿದೆ ಬಾರದೆ ಬಿಂದು ಜಲ ತಂದು
ಅರಘಳಿಗೆ ಅಚ್ಯುತಗೆ ಭಕುತಿಯಲಿ ಅಭಿಷೇಕ
ಯರದು ಯಮಬಾಧೆ ಕಳೆಯಲರಿಯದ ಮಂಕು ||2||
ಅಡವಿಯಿಂದಲಿ ಒಂದು ತುಳಸಿದಳವನೆ ತಂದು
ತಡಿಯದಲೆ ತಾವರೆದಳನಯನನ
ಅಡಿಗಡಿಗೆ ಏರಿಸಿ ಕರವ ಮುಗಿದು ಮುಕುತಿ
ಪಡಿಯಲೊಲ್ಲದ ಪರಮ ಪಾಪಿಷ್ಟ ಜನರಯ್ಯಾ||3||
ಪತ್ರ ಫಲ ಪುಷ್ಪ ತೋಯ ಮುಂದಿರಿಸಿ ನೀಲ
ಗಾತ್ರಗೆ ನೈವೇದ್ಯವೆಂದು ಬಗೆದು
ಸ್ತೋತ್ರವನೆ ಮಾಡಿ ಪ್ರದಕ್ಷಿಣೆ ನಮಸ್ಕಾರ
ನಿತ್ಯ ಒಂದೊಂದು ಮಾಡದೆ ಕರ್ಮಿಗಳು||4||
ಇಂದಿನ ಹಮ್ಮು ನಾಳಿಗೆಯಿಲ್ಲ ಈ ದೇಹ
ಇಂದು ಬಂದದೆ ನಾಳೆ ಬರಲರಿಯದೂ
ಸಿಂಧುಶಯನ ನಮ್ಮ ವಿಜಯವಿಠ್ಠಲನ ಮನ
ಬಂದಾಗ ನೆನೆದು ಭವವನದಿ ಉತ್ತರಿಸದೆ ||5||