ವರಕವಿಗಳ ಮುಂದೆ ನರಕವಿಗಳ ವಿದ್ಯೆ ತೋರಬಾರದು

ವರಕವಿಗಳ ಮುಂದೆ ನರಕವಿಗಳ ವಿದ್ಯೆ ತೋರಬಾರದು – ಈಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದು

ಪಾಪಿಗಳಿದ್ದಲ್ಲಿ ರೂಪುಳ್ಳ ವಸ್ತುವ ತೋರಬಾರದು – ಬಹುಕೋಪಿಗಳಿದ್ದಲ್ಲಿ ಅನುಭವಗೋಷ್ಠಿಯ ಮಾಡಬಾರದು||1||

ಅಡಿ ಸತ್ತ ಮಡಕೆಗೆ ಜೋಡಿಸಿ ಒಲೆಗುಂಡು ಹೂಡಬಾರದು – ಬಹುಬಡತನ ಬಂದಾಗ ನೆಂಟರ ಬಾಗಿಲ ಸೇರಬಾರದು||2||

ಹರಿಯ ನಿಂದಿಸಿ ಹರ ಘನನೆಂದು ನರಕಕ್ಕೆ ಬೀಳಬಾರದು – ತಾಪರರನು ಬೈದು ಪಾತಕಕೆ ಮುನ್ನೊಳಗಾಗಬಾರದು ||3||

ಮಡದಿ ನುಡಿಯ ಕೇಳಿ ಜಗಳಕೊಬ್ಬರ ಕೂಡೆ ಹೋಗಬಾರದು – ಬಾ-ಯ್ಬಡಿಕರು ಇದ್ದಲ್ಲಿ ವಸ್ತಿ ಬಿಡಾರವ ಮಾಡಬಾರದು ||4||

ಮುಂದೆ ಭಲಾ ಎಂದು ಹಿಂದೆ ನಿಂದಿಪರನ್ನು ಕೂಡಬಾರದು – ನಮ್ಮತಂದೆ ಬಾಡದಾದಿಕೇಶವನ ಸ್ಮರಣೆಯ ಬಿಡಬಾರದು||5||

Leave a Comment

Your email address will not be published. Required fields are marked *