ರಾಗಿ ತಂದೀರ್ಯಾ

ರಾಗಿ ತಂದೀರ್ಯಾ ಭಿಕ್ಷಕೆ ರಾಗಿ ತಂದೀರ್ಯಾ|
ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು||

ಅನ್ನದಾನವ ಮಾಡುವರಾಗಿ ಅನ್ನಛತ್ರವನಿಟ್ಟವರಾಗಿ|
ಅನ್ಯವಾರ್ತೆಯ ಬಿಟ್ಟವರಾಗಿ ಅನುದಿನ ಭಜನೆಯ ಮಾಡುವರಾಗಿ||

ಮಾತಾಪಿತರನು ಸೇವಿಪರಾಗಿ ಪಾಪಕಾರ್ಯವ ಬಿಟ್ಟವರಾಗಿ|
ರೀತಿಯ ಬಾಳನು ಬಾಳುವರಾಗಿ ನೀತಿಮಾರ್ಗದಲಿ ಖ್ಯಾತರಾಗಿ||

ಗುರುಕಾರುಣ್ಯವ ಪಡೆದವರಾಗಿ ಗುರುವಾಕ್ಯವನು ಪಾಲಿಪರಾಗಿ|
ಗುರುವಿನ ಪಾದವ ಸ್ಮರಿಸುವರಾಗಿ ಪರಮಪುಣ್ಯವ ಮಾಡುವರಾಗಿ||

ಕಾಮಕ್ರೋಧವ ಅಳಿದವರಾಗಿ ನೇಮನಿಷ್ಠೆಗಳ ಮಾಡುವರಾಗಿ|
ರಾಮನಾಮವ ಜಪಿಸುವರಾಗಿ ಪ್ರೇಮದಿ ಕುಣಿಕುಣಿದಾಡುವರಾಗಿ||

ಹರಿಯನು ಅನುದಿನ ನೆನೆಯುವರಾಗಿ ಗುರುತಿಗೆ ಬಾಹೋರಂಥವರಾಗಿ|
ಕರೆಕರೆ ಭವವನು ನೀಗುವರಾಗಿ ಪುರಂದರವಿಟ್ಠಲನ ಸೇವಿಪರಾಗಿ||

—-ಪುರಂದರದಾಸ

Leave a Comment

Your email address will not be published. Required fields are marked *