ಯೇನು ಕರುಣಾಳೋ ದೇವವರೇಣ್ಯ

ಯೇನು ಕರುಣಾಳೋ ದೇವವರೇಣ್ಯ
ಯೇನು ಭಕುತರಧೀನನೋ
ನಾನು ಎಂಬೋದು ಬಿಡಿಸಿ
ಕನ್ನಯ್ಯ ಧ್ಯಾನವಿತ್ತ ನಾರಾಯಣಾ

ಅನಂತಾನಂತ ಜನುಮದಲ್ಲಿ ಅನ್ನೋದಕ ಕಾಣದಿದ್ದ ದರಿ
ದ್ರನ್ನ ಕರವನೆ ಪಿಡಿದು ಮೃಷ್ಠಾನ್ನ ಭೋಜನ ಮಾಡಿಸಿ
ಸಂಪನ್ನವಾಗಿದ್ದ ಮತಿಯನಿತ್ತು ಪ್ರಸನ್ನನಾಗಿ
ಒಡನೆ ತಿರುಗೂವ
ಕನ್ನಿ ಸಂಕಲ್ಪ ಕೆದುರುಗಾಣದೆ ಘನ್ನ ಮೂರುತಿ ಕೇಶವಾ ||1||

ಪಾವಮಾನಿಯ ಮಖವೆ ಪೊಂದಿಸಿ
ಪಾವನವ ಮಾಡಿದನು ಬಲು ಕೃ
ಪಾವಲೋಕನ ಪರಮ ಸೂರ್ಯರ್ ರಾವಣಾಸುರ ಮರ್ದನಾ
ಆವ ಪರಿಯಲಿ ನುಡಿದ ಕವನವ ಕವಿ ಮನ್ನಿಸಿ ತಪ್ಪನೆಣೆಸದೆ
ದೇವ ಜಗತ್ರಯ ಜಿತ ಕರಣ ವಸುದೇವ ದೇವಕೀನಂದನಾ||2||

ಲೇಶವಾದರು ಪುಣ್ಯಮಾಡದೆ
ದೋಷರಾಶಿಯೊಳಿದ್ದು ಅನುದಿನ
ಮೋಸಗೊಳಿಸುವ ಭವವನಧಿ ಮಧ್ಯ ಈಶ ಕಡಕಾಣಲಾರದೆ
ಕ್ಲೇಶದಲಿ ಸಂಚರಿಸುತ್ತಿಪ್ಪ ಮಾನೀಶ ಪಶುವನು ನೋಡಿ ವೇಗದಿ
ಲೇಸು ಕೊಡುವೆನೆಂದು ಆನಂದ ದಾಸರೊಳಗಿದ್ದ ನರಹರೀ ||3||

ಬಿಂಬ ಕ್ರಿಯಾದ ಮಾರ್ಗವನೆ ಕೋರಿ
ಡಂಬಕಾ ಭಕುತಿಯನೆ ಬಿಡಿಸೀ
ಉಂಬೊ ಪಾಪವ ತೊಲಗಿಸೀ ಮನ
ವೆಂಬೋದೆ ನಿರ್ಮಲ ಮಾಡೀ
ಹಂಬಲಿಸಿ ತನ್ನ ಪಾದ ಪದುಮದ
ಇಂಬು ಬಯಸುವ ಸುಖವೆ ಪಾಲಿಸಿ
ಅಂಬರದಿ ನಿಜರೂಪ ತೋರುವ
ಪೊಂಬುಡೆಧರ ಗೋವಿಂದಾ ||4||

ಜಪತಪಾನುಷ್ಠಾನ ನಾನಾ ವುಪವಾಸ ವ್ರತದಾನ ಧರ್ಮಗ
ಳಪರಿಮಿತವಾದ ಯಾಗ ಕನ್ಯಾದಾನ ನಾನಾಲೋಚನ
ಅಪರಿಮಿತವಾಗಿ ಮಾಡಲೊಮ್ಮೊಮ್ಮೆ
ಸ್ವಪನದಲಿ ಕಾಣಿಸುವ ತಾನೆ
ಕೃಪಣರಿಗೆ ವಲಿದಲ್ಲದೆ ಬಿಡ ಚಪಲ ವಿಜಯವಿಠಲಾ||5||

Leave a Comment

Your email address will not be published. Required fields are marked *