ಯೆಲ್ಲಿ ಭಯಗಳು ಹರಿಯ ಭಕುತರಿಗೆ

ಯೆಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲಾ |
ಇಲ್ಲವೋ ಕಾಣೋ ಯೆಂದಿಗಾದರು ಮರುಳೆ

ಹುಲಿ ಇಲಿಯಾಗುವದು ತೋಳ ಕೋಳ್ಯಾಗುವುದು |
ಕಲಿ ಬಂದು ಹಿತ್ತಿಲನ್ನೀಗ ಬಳಿವಾ ||
ಮೂಲ ಮಹಾಚೋರ ಚೊಚ್ಚಿಲ ಗೌಡಿಮಗನಾವಾ |
ಜಲಜಾಕ್ಷನ ಕೃಪೆಯ ಪಡೆದ ದಾಸರಿಗೆ ||1||

ಕರಡಿ ಕರು ಆಗುವದು ಉರಿ ಮಂಜು ಆಗುವದು |
ಕರಿ ನಾಯಿ ಆಗುವದು ಕಂಡವರಿಗೆ ||
ಭರದಿಂದ ಸುರಿವ ಮಳೆ ನಿಲ್ಲೆನಲು ನಿಲುವದು |
ನರಹರಿಯ ನಾಮಗಳ ನಂಬಿ ಪಠಿಪರಿಗೆ ||2||

ಘಣಿ ಸರವೆ ಆಗುವದು ದಣುವಾಗುತಿಹ ಮಾರ್ಗ
ಕ್ಷಣದೊಳಗೆ ಪೋದಂತೆ ಕಾಣಿಸುವದು ||
ಘನ ಪಾಷಾಣಗಳು ತೃಣ ಸಮವು ಯೆನಿಸುವವು
ವನಜಾಕ್ಷನ ಕೃಪೆಯ ಪಡದ ದಾಸರಿಗೆ ||3||

ಕ್ಷುಧೆ ತೃಷೆಯಾಗದು ಕ್ಷುದ್ರ ಸಂಗ ಬಾರದು |
ಪದೇ ಪದೆಗೆ ರೋಗಗಳು ಬೆನ್ನಟ್ಟವು ||
ಉದಯಾಸ್ತಮಾನವೆಂಬೋ ಭಯವು ಸುಳಿಯದು |
ಪದುಮನಾಭನ ಕೃಪೆಯ ಪಡೆದ ದಾಸರಿಗೆ||4||

ಬಾರವು ಭಯಗಳು ಬಂದರು ನಿಲ್ಲವು |
ಹಾರಿ ಹೋಗುವವು ದಶದಿಶಗಳಿಗೆ ||
ಘೋರ ದುರಿತಾರಿ ಶ್ರೀ ವಿಜಯವಿಠಲನಂಘ್ರಿ |
ಸೇರಿದಾ ಜನರಿಗೆ ಇನಿತಾಹುದುಂಟೇ ||5||

Leave a Comment

Your email address will not be published. Required fields are marked *