ಯಾದವ ನೀ ಬಾ

ಯಾದವ ನೀ ಬಾ ಯದುಕುಲನಂದನ
ಮಾಧವ ಮಧುಸೂದನ ಬಾರೋ||

ಸೋದರಮಾವನ ಮಥುರೆಲಿ ಮಡುಹಿದ
ಯಶೋದಾಕಂದ ನೀ ಬಾರೋ||

ಕಣಕಾಲಂದುಗೆ ಘುಲುಘುಲುರೆನುತಲಿ
ಝಣಝಣ ವೇಣುನಿನಾದದಲಿ|
ಚಿಣ್ಣಿಕೋಲು ಚೆಂಡು ಬುಗುರಿಯನಾಡುತ
ಸಣ್ಣವರೊಡಗೂಡಿ ನೀ ಬಾರೋ||

ಶಂಖ ಚಕ್ರವು ಕೈಯಲಿ ಹೊಳೆಯುತ
ಬಿಂಕದ ಗೋವಳ ನೀ ಬಾರೋ|
ಅಕಳಂಕ ಚರಿತನೆ ಆದಿನಾರಾಯಣ
ಬೇಕೆಂಬ ಬಕ್ತರಿಗೊಲಿ ಬಾರೋ||

ಖಗವಾಹನನೆ ಬಗೆಬಗೆರೂಪನೆ
ನಗೆಮೊಗದರಸನೆ ನೀ ಬಾರೋ|
ಜಗದೊಳು ನಿನ್ನಯ ಮಹಿಮೆಯ ಪೊಗಳುವೆ
ಪುರಂದರವಿಟ್ಠಲ ನೀ ಬಾರೋ||

—-ಪುರಂದರದಾಸ

Leave a Comment

Your email address will not be published. Required fields are marked *