ಮಾಡಬಾರದ ಮಾಡಿ, ಆಗಬಾರದು ಆಗಿ
ಬಾಳೆಲ್ಲ ಬರಿದಾಗಿ, ಗೋಳೊಂದೆ ಉಳಿದಾಗ
ಅಂತರಾಳದಿ ಬೆಳಗಿ, ಸಂತಸವ ಕರುಣಿಸಿಹೆ
“ಏಳು ಮಗು, ನಾನಿಹೆನು!” ಎನ್ನುತ್ತ ಕರೆದೆ||
ಅವರಿವರ ಉಪದೇಶ ಬರಿಯ ಬಾಯ್ಮಾತಾಗಿ
ರವಿರಹಿತ ಕತ್ತಲೆಯೆ ಎತ್ತೆತ್ತ ಕವಿದಾಗ
ಕರುಣಿಸಿಹೆ ಓ ತಾಯಿ, ತವ ಚರಣದಾಶ್ರಯವ
“ಬಾ ಕಂದ, ಇಹೆ ನಾನು, ಕುಂದದಿರು” ಎಂದು||
ಜಗವೆಲ್ಲ ಕೈಬಿಟ್ಟು ಮತಿಗೆಟ್ಟು, ಗತಿಗೆಟ್ಟು,
ಆವುದನು ಗೈಯಲೂ ತ್ರಾಣವಿಲ್ಲದ ಎನಗೆ
“ನಾನೆ ಸಾಧನೆ ಸಿದ್ಧಿ ಗತಿ ಆಸರೆಯು ನಿನಗೆ”
ಎನ್ನುತ್ತ ವರವಿತ್ತ ಗುರು-ದೈವ-ಜನನಿ||
—ಸ್ವಾಮಿ ಶಾಸ್ತ್ರಾನಂದ