ಮರೆಯಬೇಡ ಮನವೆ ನೀನು ಹರಿಯ ಸ್ಮರಣೆಯ||
ಯಾಗಯಜ್ಞ ಮಾಡಲೇಕೆ
ಯೋಗಿಯತಿಯು ಆಗಲೇಕೆ|
ನಾಗಶಯನ ನಾರದನುತನ
ಕೂಗಿ ಭಜನೆ ಮಾಡೋ||
ಸತಿಯು ಸುತರು ಹಿತರು ಎಂದು
ಮತಿಯುಗೆಟ್ಟು ಕೆಡಲಿಬೇಡ|
ಗತಿಯು ತಪ್ಪಿ ಹೋಗುವಾಗ
ಸತಿಯು ಸುತರು ಬರುವರೇ||
ಹರಿಯ ಸ್ಮರಣೆ ಮಾತ್ರದಿಂದ
ಘೋರದುರಿತವೆಲ್ಲ ನಾಶ|
ಪರಮಪುರುಷ ಶ್ರೀ ಪುರಂದರ
ವಿಟ್ಠಲೋರಾಯ ಪದವಿ ಕೊಡುವ||
—-ಪುರಂದರದಾಸ