ಭರತಖಂಡದ ನೀಲಗಗನವ ತಿಮಿರ ಮುಸುಗಿರಲು,
ಭಾರತೀಯರು ತಮ್ಮ ಧ್ಯೇಯವ ಮರೆತು ಮಲಗಿರಲು,
ಪರಮಹಂಸನೆ, ಉದಯಸೂರ್ಯನ ತೆರದಿ ರಂಜಿಸಿದೆ.
ಹೃದಯ ನಭದ ಜ್ಞಾನತಿಮಿರವನಿರದೆ ಭಂಜಿಸಿದೆ.
ಸರ್ವಮಾರ್ಗಗಳೊಂದೆ ನಿಲಯಕೆ ಪೋಪುವೆಂಬುದನು
ಯೋಗವಿದ್ಯೆಯೊಳರಿತು ಮಾನವಕುಲಕೆ ಬೋಧಿಸಿದೆ;
ಕ್ರೈಸ್ತ ಹಿಂದೂ ಮಹಮದೀಯರೆ ಬೌದ್ಧಮೊದಲಾದ
ಮತಗಳಾತ್ಮವದೊಂದೆ ಎಂಬುದ ತಿಳುಹಿ ಪಾಲುಸಿದೆ.
ಕ್ರಿಸ್ತ ಮಹಮದ ರಾಮ ಕೃಷ್ಣ ಜೊರಾಸ್ತ ಗೌತಮರು
ದಿವ್ಯ ವೇದ ಕೊರಾನು ಬೈಬಲು ತಲ್ಮಡಾದಿಗಳು
ಗುಡಿಯು ಚರ್ಚು ಮಸೀದಿ ಆಶ್ರಮ ಅಗ್ನಿಪೂಜೆಗಳು
ಕಾಶಿ ಮಕ್ಕಗಳೆಲ್ಲ ನಿನ್ನೊಳಗೈಕ್ಯ ‘ವಾಗಿಹವು’!
ದಕ್ಷೀಣೇಶ್ವರ ದೇವನಿಲಯದ ಪರಮಯೋಗೀಂದ್ರ
ಶ್ರೀ ವಿವೇಕಾನಂದ ಪೂಜಿತನಾತ್ಮಭಾವಿತನೆ
ಲೋಕಜೀವರಿಗಾತ್ಮಶಕ್ತಿಯ ನೀಡಿ ಕಾಪಾಡು
ನೆನೆವರೆಲ್ಲರ ಹೃದಯವಾಗಲಿ ನಿನ್ನ ನೆಲೆವೀಡು
—ಕುವೆಂಪು