ಬೋಧಿವೃಕ್ಷದಡಿ ಧ್ಯಾನದಿ

ಬೋಧಿವೃಕ್ಷದಡಿ ಧ್ಯಾನದಿ ಮುಳುಗಿಹ
ಯೋಗಿವರ್ಯನೆ ನೀನಾರು |
ತಪದ ತಾಪದಿಂ ದೇಹವು ಸೊರಗಿದೆ
ಜ್ಯೋತಿಯು ಹಣೆಯಲಿ ಬೆಳಗುತಿದೆ||

ಹೊರಗಡೆ ಕಾಂಬುದು ಜೋಗಿಯ ವೇಷ
ಮುಖದಲಿ ರಾಜಕುಮಾರನ ತೇಜ|
ಯಾರ ಭವನವನು ಅಂಧಕಾರದಲಿ
ಮುಳುಗಿಸಿ ಬಂದಿಹೆ ಪೇಳೆಲೆ ಜವದಿ||

ಜ್ಞಾನಲಾಭವೋ ದೇಹಪಾತವೋ
ಆಗಲಿ ಒಂದು ಎರಡರಲಿಂದು|
ಪಣವ ತೊಟ್ಟು ನೀ ಬಸವಳಿದಿರಲು
ಕಲ್ಲೂ ಕರಗುತ ನೀರಾಗುವುದು||

ತಾಪತ್ರಯದಲಿ ಬೆಂದಿಹ ಜನರನು
ಉದ್ಧರಿಸಲು ನೀ ಬಂದಿಹೆಯೇನು|
ವಿಶ್ವಪ್ರೇಮವ ಪ್ರಚಾರಗೈಯಲು
ನಿಜಸುಖವನು ನೀ ತ್ಯಜಿಸಿಹೆಯೇನು||

                                        —-ಸ್ವಾಮಿ ಹರ್ಷಾನಂದ

Leave a Comment

Your email address will not be published. Required fields are marked *