ಬೇವು ಬೆಲ್ಲದೊಳಿಡಲೇನು ಫಲ

ಬೇವು ಬೆಲ್ಲದೊಳಿಡಲೇನು ಫಲ
ಹಾವಿಗೆ ಹಾಲೆರೆದೇನು ಫಲ||

ಕುಟಿಲವ ಬಿಡದಿಹ ಮನುಜರು ಮಂತ್ರವ
ಪಠನೆಯ ಮಾಡಿದರೇನು ಫಲ|
ಸಟೆಯನ್ನಾಡುವ ಮನುಜರು ಸಂತತ
ನಟನೆಯ ಮಾಡಿದರೇನು ಫಲ||

ಕಪಟತನದಲಿ ಕಾಡುತ ಜನರನು
ಜಪವನು ಮಾಡಿದರೇನು ಫಲ|
ಕುಪಿತತನವನು ಬಿಡದೆ ನಿರಂತರ
ಉಪವಾಸ ಮಾಡಿದರೇನು ಫಲ||

ಮಾತಾಪಿತರನು ಬಳಲಿಸಿದಾತನು
ಯಾತ್ರೆಯ ಮಾಡಿದರೇನು ಫಲ|
ಘಾತಕತನವನು ಬಿಡದೆ ನಿರಂತರ
ಗೀತೆಯನೋದಿದರೇನು ಫಲ||

ಹೀನಗುಣಂಗಳ ಹಿಂಗದೆ ಗಂಗೆಯ
ಸ್ನಾನವ ಮಾಡಿದರೇನು ಫಲ|
ಶ್ರೀನಿಧಿ ಪುರಂದರವಿಟ್ಠಲನ ನೆನೆಯದೆ
ಮೌನವ ಮಾಡಿದರೇನು ಫಲ||

                                —-ಪುರಂದರದಾಸ

2 thoughts on “ಬೇವು ಬೆಲ್ಲದೊಳಿಡಲೇನು ಫಲ”

  1. Hi excellent work from the team
    I request if you can provide audio version of the same will be very useful
    Thanks

Leave a Comment

Your email address will not be published. Required fields are marked *