ಬಿನ್ನಹಕೆ ಬಾಯಿಲ್ಲವಯ್ಯ
ಅನಂತ ಅಪರಾಧ ಎನ್ನೊಳಗೆ ಇರಲಾಗಿ||
ಶಿಶುಮೋಹ ಸತಿಮೋಹ ಜನನಿ-ಜನಕರ ಮೋಹ
ರಸಿಕ ಭ್ರಾತರ ಮೋಹ ರಾಜಮೋಹ|
ಪಶುಮೋಹ ಭೂಮೋಹ ಬಂಧುವರ್ಗದ ಮೋಹ
ಅಸುರಾರಿ ನಿನ್ನ ಮರೆತೆನೋ ಕಾಯೋ ಹರಿಯೇ||
ಅನ್ನಮದ ಅರ್ಥಮದ ಅಖಿಲ ವೈಭವದ ಮದ
ಮುನ್ನ ಪ್ರಾಯದ ಮದವು ಪೂಪಮದವು|
ತನ್ನ ಸತ್ತ್ವದ ಮದ ಧಾತ್ರಿವಶದ ಮದ
ಇನ್ನು ತನಗೆದುರಿಲ್ಲವೆಂತೆಂಬ ಮದದಿಂದ||
ಇಷ್ಟು ದೊರೆಕಿದರೆ ಮತ್ತಿಷ್ಟು ಬೇಕೆಂಬಾಸೆ
ಅಷ್ಟು ದೊರಕಿದರೆ ಮತ್ತಿಷ್ಟರಾಸೆ|
ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ
ನಷ್ಟಜೀವನದಾಸೆ ಪುರಂದರವಿಟ್ಠಲ||
—-ಪುರಂದರದಾಸ