ಬಂದದೆ ಎನಗೆ ಬರಿದೆ ದೂರು
ಬಂದೊಂದು ಅವಗುಣದವನೆಂಬೊ ಮಾತು
ಕಾಮಕ್ರೋಧಂಗಳು ಹೆಚ್ಚಿಸಿ ಮನದೊಳು
ತಾಮಸ ಬುದ್ಧಿ ವಿಶೇಷವಾಗಿ
ಕಾಮುಕವಾಗಿ ನಡವಳಿ ನಡಸಿದ ಈ
ಮನದ ಅಧಿಕಾರಿ ಶ್ರೀಕೃಷ್ಣನೊ ನಾನೊ ||1||
ಅನ್ಯಾಯ ಅನ್ಯಾಯ ಅಸಡ್ಡಾಳ ಅಪದ್ಧ
ನನ್ನ ನಿನ್ನದು ಎಂಬೊ ಬಡದಾಟವು
ತನ್ನ ಸ್ಮರಣಿ ತಪ್ಪಿ ವಿಷಯಕ್ಕೆ ಎರಗಿಸಿ
ಮುನ್ನ ಮನದ ದಾತಾ ಶ್ರೀಕೃಷ್ಣನೊ ನಾನೊ ||2||
ಮನೆ ಮನೆಗಳ ಪೊಕ್ಕು ಮಕ್ಕಳಾಟಿಕೆಯಿಂದ
ವನುರುತರ ರೂಪಿಗೆ ಸೋತು ಆತು
ಕನಿಕರಿಸಿ ಕ್ರಮಗೆಟ್ಟು ತಿರುಗಿಸುವ
ತನವು ಮಾಡಿದಾತಾ ಕೃಷ್ಣನೊ ನಾನೊ ||3||
ನೀತಿ ನಿರ್ಣಯ ಮರೆದು ಪಾತಕದೊಳು ಬಿದ್ದು
ಪ್ರೀತಿಯಲಿ ಅತಿಥಿಗಳ ವಂದಿಸದೆ
ಯಾತಕ್ಕೆ ಬಾರದಾ ಚರಿತೆ ನಡೆವಂಥ
ಚೇತನ ಕಲ್ಪಿಸಿದ ಕೃಷ್ಣನೊ ನಾನೊ ||4||
ಆವಾವ ದುಷ್ಕರ್ಮಗಳ ಮಾಡಿ ಉತ್ತಮ
ದೇವ ಬ್ರಾಹ್ಮಣರ ಪೂಜಿಸಲಿಲ್ಲವು
ಶ್ರೀ ವಿಜಯವಿಠ್ಠಲ ವೆಂಕಟಗಲ್ಲದ
ಜೀವ ಪುಟ್ಟಿಸಿದಾತ ಕೃಷ್ಣನೋ ನಾನೊ ||5||