ನೋಡಿರಣ್ಣ ನೀವೆಲ್ಲ ಬಂದು

ನೋಡಿರಣ್ಣ ನೀವೆಲ್ಲ ಬಂದು ಈ ನೂತನ ಮಾನವನ|
ತ್ಯಾಗ-ವಿವೇಕದ ಚೀಲಗಳೆರಡನು ಹೆಗಲಲಿ ಹೊತ್ತಿಹನ||

ಗಂಗೆಯ ದಡದಲಿ ಹೊರಳುತ ‘ತಾಯೀ’ ಎನ್ನುತ ಕೂಗುವನು|
‘ಕಾಣದೆ ನಿನ್ನನು ದಿನಗಳುರುಳುತಿವೆ’ ಎನ್ನುತ ಮರುಗುವನು||

ನಂಬದ ನೆಚ್ಚದ ಮಂದಮತಿಗಳಿಗೆ ಸರಳಕಥೆಯ ಹೇಳಿ|
ಕಾಳಿಯು ಕೃಷ್ಣನು ಒಂದೇ ಎನ್ನುತ ಸಾರುತಿಹನು ಕೇಳಿ||

ಅಕ್ವಾ-ವಾಟರ್-ಪಾನಿ-ವಾರಿಗಳು ನೀರಿಗೊಂದೆ ಹೆಸರು|
ಅಲ್ಲಾ-ಜೀಸಸ್-ಮೋಸೆಸ್-ಕಾಳಿಯರು ಪರಬ್ರಹ್ನನುಸಿರು||

ಪಂಡಿತ-ಪಾಮರ-ಬಡವನು-ಬಲ್ಲಿದ ಭೇದ ತೋರಲಿಲ್ಲ|
ಜಾತಿಮತಗಳಾ ರೀತಿನೀತಿಗಳ ಮನಕೆ ತಾರಲಿಲ್ಲ||

ದಿವ್ಯೋನ್ಮಾದದಿ ಬಾಹುಗಳೆರಡನು ಬೀಸಿ ಕರೆಯುತಿಹನು|
ತಾಮಸಗೈಯದೆ ಎಲ್ಲರು ಬೇಗನೆ ಬನ್ನಿರೆನ್ನುತಿಹನು||

ಜಗದ ಜನಗಳಿಗೆ ಕೃಪೆಯನು ತೋರಲು ಕಾತರಗೊಂಡಿಹನು|
ಭವಸಾಗರವನು ದಾಟಿಸೆ ನೌಕೆಯ ತಂದು ಕಾಯುತಿಹನು||

                                                                                     —-ಮುರಳೀಧರ

Leave a Comment

Your email address will not be published. Required fields are marked *