ನೋಡಿದ್ಯ ರಂಗೈಯನ ನೋಡಿದ್ಯ
ನೋಡಿದ್ಯ ಮನವೆ ನೀನಿಂದು ಕೊಂ-
ಡಾಡಿದ್ಯ ಎದುರಲ್ಲಿ ನಿಂದು ಆಹ ಮಾ-
ತಾಡಿದ್ಯ ವರಗಳ ಬೇಡಿದ್ಯ ನಿನ್ನೊಳು
ಕೂಡಿ ನಲಿನಲಿದಾಡುವ ಶ್ರೀ ರೂಪ
ಚರಣತಳದಲ್ಲಿ ಕೆಂಪು- ಶುದ್ದ
ಅರವಿಂದ ಧ್ವಜ ವಜ್ರಸೊಂಪು- ಸ್ತುತಿ
ಪÀರಿಗೆ ಸುರಂಘ್ರಿಪ ತಂಪು- ನೋಡ-
ಲರಸಿ ಕಾಣದೊ ವೇದಗುಂಪು, ಆಹ
ಹರಡಿ ಹಿಂಬಳೆ ಸಾಲ್ಬೆರಳೈದರ ಮೇಲೆ
ಸುರುಚಿರ ರೇಖೆ ಚಂದ್ರಮನ ಸೋಲಿಪ ನಖ||1||
ಸರಸ ನೂಪುರ ಗೆಜ್ಜೆ ಪೆಂಡ್ಯ – ಹೊನ್ನ
ಸರಪಳಿ ಪಾಡಗ ಕಂಡ್ಯ – ಹಿಂದೆ
ಧರೆಗೆ ಮುಟ್ಟಿದ ಜಡೆಗೊಂಡ್ಯ – ಇದು
ತರುಣಿ ಎನ್ನದಿರು ಕಂಡ್ಯ – ಆಹ
ಬೆರಳಲ್ಲಿ ಇಟ್ಟ ಸುಂದರ ಪಿಲ್ಲಿಮೆಂಟಿಕೆ
ಕಿರಿಪಿಲ್ಲಿ ಅಡಿಮೆಟ್ಟು ಮೆರೆವ ಕಾಲುಂಗರ||2||
ಝಣ ಝಣ ಗೆಜ್ಜೆನಾದ – ವನ್ನು
ಎಣಿಸಲಾರದು ನೋಡಿ ವೇದಾ – ನಂತ –
ಗುಣಗಳುಭೈರಿಸುವ ಮೋದ – ಇದು
ಅಣುರೇಣು ತೃಣಕಾಷ್ಠ ಭೇದ, ಆಹ
ಪ್ರಣತಾರ್ತಿ ಹರವಾದ ಮಿನುಗುವ ಜಾನುದ –
ರ್ಪಣ ನಾಚಿಪ ಜಂಘೆ ಎಣೆಗಾಣೆ ಸ್ತ್ರೀರೂಪ ||3||
ಊರುದ್ವಯಂಗಳು ರಂಭಾ – ಸ್ತಂಭ
ಚಾರು ಪೊಕ್ಕುಳ ಸುಳಿಗುಂಭ – ತಂತ್ರಾ –
ಸಾರೋಕ್ತದಿ ಪೂಜೆಗೊಂಬ – ವಿ
ಸ್ತಾರ ಮಹಿಮೆ ಗುಣತುಂಬ, ಆಹ
ನಾರಿ ಲಾವಣ್ಯದ ಪಾರ ಮೀರಿದ ಕಾಂತಿ
ಆರಾರ ಮನಸಿಗೆ ತೋರದ ಪೆಣ್ಣಿನ||4||
ಉದಯರಾಗದ ದಿವ್ಯವಸನ – ಮೇಲೆ
ಉದರ ತ್ರಿವಳಿ ಬಂದಿ ಹಸನ – ಕೇಳು
ಮುದದಿಂದ ವಡ್ಯಾಣ ಬೆಸನ – ನೋಡು
ಯದುಕುಲ ಜಾತ ಮಾನಿಸನ, ಆಹ
ಮದಕರಿಯಂದದಿ ವಲಿದೊಲಿದಾಡಲು
ಮದನಾರಿ ಮರುಳಾದ ಅದುಭುತ ಚರಿಯನ್ನ ||5||
ದೋರ್ಯ ಹರಡಿ ಕೈಕಟ್ಟು – ಚೂಡ್ಯ
ಈರೈದುಂಗುರವುಳ್ಳ ಬೆಟ್ಟು – ಬಂ –
ಗಾರ ಕಂಕಣ ಬಳೆಯಿಟ್ಟು – ಶೃಂ
ಗಾರ ಹಣೆಗೆ ಹಚ್ಚಿ ಬೊಟ್ಟು, ಆಹ
ಗೀರು ಗಂಧವು ಗಂಬೂರ ಕರ್ಪೂರ ಕ-
ಸ್ತೂರಿ ಲೇಪನ ಶೃಂಗಾರ ತ್ರಿವಳಿಯ ||6||
ತಾಯಿತು ಮುತ್ತ ಕಟ್ಟಾಣಿ – ತೋಳ
ತಾಯಿತ ಬಂಧುರ ಮಣಿ – ವಂಕಿ
ಕೇಯೂರ ಪಲ್ಲವ ಪಾಣಿ – ಉ
ಪಾಯದಲ್ಲಿ ಘಟ್ಟಿ ಕಾಣಿ, ಆಹ
ನೋಯದೆ ಸುರರಿಗೆ ಪೀಯೂಷ ವುಣಿಸಿ ದೈ-
ತೇಯರ ಮಡುಹಿದ ಮಾಯದ ಕನ್ನಿಕೆ ||7||
ಸರಿಗೆ ಮುತ್ತಿನ ಚಿಂತಾಕ – ಕುಚ-
ವೆರಡರ ಮೇಲೆ ಕಂಚುಕ – ತೊಟ್ಟ
ಭರದಿ ತೂಗುವ ಪಚ್ಚೆಪದಕ – ಕೆಳಗೆ
ಹರಿ ನಡುಕಿಂಕಿಣಿ ಕನಕ, ಆಹ
ಹರಳು ಕೆತ್ತಿದ ಚಿತ್ತರ ಮಾಟ ಕಟಿಸೂತ್ರ
ಧರೆಗೆ ಶೋಭಿಪ ಸೀರೆ ನೆರೆಯ ವೈಭವವನು ||8||
ರನ್ನ ಪವಳ ಸರ ಥಳಕು – ಜೋಡು
ಕನ್ನಡಿ ಹಾಕಿದ ಮಲಕು – ನೋಡು
ಅನ್ನಂತ ಸೂರ್ಯರ ಝಳಕು – ಲೋಕ
ಚನ್ನಾಗಿ ತುಂಬಿದ ಬೆಳಕು
ರನ್ನ ತ್ರಿವಳಿ ಹೇಮ ಸಣ್ಣ ಮುತ್ತಿನ ಮೋ
ಹನ್ನ ಏಕಾವಳಿ ಚಿನ್ನದ ಸರಗಳು ||9||
ಸಿರಿವತ್ಸ ಕೌಸ್ತಭ ಹಾರ-ವೊಪ್ಪೆ
ಉರ ವೈಜಯಂತಿ ಮಂದಾರ – ಮೇಲೆ
ತರುಣ ತುಲಸಿ ಜನಿವಾರ – ಇಟ್ಟು
ವರಭುಜಕೀರ್ತಿ ಕುಂಜರ, ಆಹ
ಕರದಂತೆರಡು ತೋಳು ಎರಡೊಂದಾರು ಸಾ-
ವಿರ ರೂಪನಾಗಿ ಶರೀರದೊಳಿಪ್ಪನ ||10||
ಸಕ್ಕರೆ ತುಟಿ ಕೂರ್ಮ ಕದಪು – ಕಣ್ಣಿ-
ಗಿಕ್ಕಿದ ಸೊಬಗಿನ ಕಪ್ಪು – ತಲೆ –
ಹಿಕ್ಕಿ ಬಾಚಿದ ಕೇಶ ಥಳಪು – ಸರ್ವ
ದಿಕ್ಕು ಮೋಹಿಸುವಂಥ ವಲಪು, ಆಹ
ಲಕ್ಕುಮಿ ದೇವಿಯ ಲೆಕ್ಕಿಸದೇ ಮಗನ
ಪೊಕ್ಕುಳಿಂದಲಿ ವೆತ್ತ ಅಕ್ಕಜದಬಲೆಯ||11||
ಸೂಸುವ ದಾಡಿಯ ದಂತ – –
ನಾಸ ಮೂಗುತಿಯಿಟ್ಟ ಶಾಂತ – ಸುಖ
ಲೇಸು ಹಾಸ ಜಗದಂತ – ರಂಗ
ಭಾಸ ಮಿಗಿಲು ಚಂದ್ರಕಾಂತ, ಆಹ
ಸುಷುಪ್ತಿಯಲ್ಲಿ ಭೂಶ್ವಾಸ ಬಿಡುವರನ್ನು
ಲೇಸಾಗಿ ಸಲಹುವ ದೋಷನಾಶನ ರೂಪ||12||
ಎಸೆವ ಪಂಜರದೋಲೆ ಕಿವಿಯ-ಹೊನ್ನ
ಕುಸುಮ ಕೂಡಿದ ಬಾವಲಿಯ – ತಿದ್ದಿ
ಕುಸುರಿಯಿಕ್ಕಿದ ಸರಪಣಿಯ – ಚಿನ್ನ
ಸೋಸಲು ಕುಂಕುಮ ರ್ಯಾಕಟೆಯ, ಆಹ
ಎಸಳು ಕೇದಿಗೆ ಬಹು ಕುಸುಮವ ಮುಡಿದದ್ದು
ವಶವಲ್ಲ ಚೌರಿ ಅರಸಿನ ಪೂಸಿದ ಹೆಣ್ಣ||13||
ಭ್ರೂಲತೆ ವಲಯ ಕಪೋಲ – ಪೊಸ-
ಮೌಳಿ ಕೈಯಲ್ಲಿ ಕಡೆÀಗೋಲ – ನೇಣು
ಪಾಲಯ ಪಿಡಿದ ಸುಶೀಲ – ಧರೆಯ –
ನಾಳಿದ ಭಕ್ತವತ್ಸಲ, ಆಹ
ಶೂಲಿಯ ನೆಲೆಸಿದ ಖೂಳನ ಸದೆದು ಹಿ-
ಯ್ಯಾಳಿಸಿ ಮೆರೆದ ಗೋಪಾಲನೆಂಬ ಹೆಣ್ಣ||14||
ರಜತ ಪೀಠ ಪುರಾಧೀಶ – ನಂದ
ವ್ರಜದೊಳಾಡಿದ ಸರ್ವೇಶ – ನಮ್ಮ
ವಿಜಯವಿಠ್ಠಲ ನಾರಿವೇಷ – ತನ್ನ
ನಿಜಭಕ್ತ ಮಧ್ವಮುನೀಶ, ಆಹ
ಭಜನೆ ಮಾಡಲು ಮೆಚ್ಚಿ ತ್ರಿಜಗ ಮಧ್ಯದಲಿ
ನಿಜ ಪದವಿಯನಿತ್ತು ಸುಜನರಿಗೊಲಿದನ್ನ||15||