ನೋಡಿದೆನು ತಿರುವೆಂಗಳೇಶನಾ
ಮಾಡಿದೆನು ಭಕುತಿಯಲಿ ವಂದನೆ
ಬೇಡಿದೆನು ಕೊಂಡಾಡಿ ವರಗಳ
ನಾಡೊಳಗೆ ಈಡಿಲ್ಲದಪ್ಪನಾ
ಘನಸುಂದರ e್ಞÁನ ತೀರ್ಥ ಆನಂದ
ಕನಕ ಮುಕ್ತ ವೈಕುಂಠ
ಧನ ವರಹಾ ವೈರಾಗ್ಯನಿಲಿ ರ
ತುನ ಚಂದ್ರಮ ವರಧÀರ್ಮ ನಾರಾ
ಯಣ ಭಕುತಿ ಶ್ರೀಕಾಂತಿ ಬ್ರಹ್ಮಾ
ರುಣ ವೃಷಭ ಶ್ರುತಿ ಗರುಡ ಸರ್ಪ
ಜನತ ಪೂಜಿಪ ಸುರ ಸುಧಾನಂತ
ಇನಿತು ಪೆಸರುಳ್ಳ ಪುಷ್ಕರಾದ್ರಿಯಾ||1||
ಖಗನ ಪೆಗಲಲಿ ನಗವ ತಂದ
ಜಗದೊಳು ಸುವರ್ಣಮುಖರಿ ನಿ
ಮ್ನಗ ತೀರದಲಿ ಸ್ಥಾಪಿಸಿದ ಸುತ್ತಲು
ಝಗಝಗಿಸುದೆ ನೋಳ್ಪ ಜನರಿಗೆ
ಅಗಣಿತ ಅಗಾಧಗಳು ತೆಗೆದು
ಹಿಮ್ಮೊಗವಾಗಿ ಪೋದವು
ಯುಗ ಯುಗ ಕಥಾಭೇದ ಬಗೆಬಗೆ
ಪೊಗಳಿದರೆ ನೆಲೆಗಾಣೆ ಅನುದಿನಾ ||2||
ಸರಸ್ವತಿಗೆ ಮುನಿಯಿಂದ ಶಾಪವು
ಬರಲು ಭರದಲಿ ಬಂದು ವಿರಜಾ
ಸರತಿಯೊಳು ಬೆರಸಿದಳ್ ತಪದಲಿ
ಹರಿಯ ಕರುಣವ ಪಡೆದು ಪ್ರತಿದಿನ
ಸ್ಮರಸಿದವರಿಗೆ ಪುಣ್ಯವೀವುತ
ಸರುವ ಸರೋವರಧಿಕವೆನಿಪ ಸುಂ
ದರ ಸ್ವಾಮಿ ಪುಷ್ಕರಣಿಯನು ತ್ರಿ
ಕರಣ ಬಲು ಒಂದಾಗಿಬಿಡದಲೆ ||3||
ಎರಡೈದು ಪ್ರಾಕಾರ ಗೋಪುರಾ
ಎರಡೈದು ದ್ವಾರಗಳು ಕಟ್ಟಿದಾ
ಮಿರುಗುವತಿ ಮಹಾ ಮಕರ ತೋರಣ
ಧರೆಗೆ ಮಟ್ಟಿದ ಎಡಬಲದ ಪೂ
ಸರಗಳೊಪ್ಪಲು ದ್ವಾರಪಾಲಕರಿ
ರುತಿಪ್ಪರಲ್ಲೆಲ್ಲಿ ಕಾವುತಾ
ತರುಚರಾದಿಯ ನಿಕರ ತುಂಬಿರೆ
ಪರಿಪರಿಯ ಮಂಟಪಗಳಿಂದಾ ||4||
ಭಂಗರಹಿತ ಬಂಗಾರಮಯವಾದಾ
ತುಂಗ ಆನಂದ ನಿಲಯ ವಿಮಾನಾ
ಕಂಗಗಳಿಗೆ ಬಲು ತೇಜಿಃಪುಂಜದಿ
ಹಿಂಗದಲೆ ಗೋಚರಿಸುತದೆ ನರ
ಸಿಂಗ ಮೂತ್ರ್ಯಾದಿಗಳು ಪ್ರಾಣ ಭು
ಜಂಗಧರಾದಿ ದಿಕ್ಪಾಲರೆಲ್ಲರು
ಸಂಗ ಮತಿಯಲಿ ವಾಸವಾಗಿರೆ
ಮಂಗಳಾಂಗ ಪ್ರಿಯಾಂಗ ಪ್ರಿಯನಾ ||5||
ಮುಕ್ತಿ ಬೀದಿಗಳೆರಡು ವಿ
ರಕ್ತಿ e್ಞÁನ ಸತ್ಕರ್ಮ ಬಲು ದೃಢ
ಭಕ್ತಿಯೋಗವು ಯಾವ ತ್ಯಾಗ ಸಂ
ವ್ಯಕ್ತ ರಾಗವು ಈಪರಿ ಸು
ಉಕ್ತಿ ದ್ವಾದಶ ಸಾಲ ಬೀದಿಗ
ಳುಕ್ತ ಜನ ಸಂಚರಿಸುತ್ತಿಪ್ಪರು
ಶಕ್ತನೊಬ್ಬನೆ ಜಗದೊಳೀತನೆ
ವ್ಯಕ್ತ ಅವ್ಯಕ್ತದಲಿ ಚಿತ್ರವಾ ||6||
ಲೋಕೇಶ ಲೋಕಪಾಲಕರು ಖಗ
ಕಾಕೋದರ ಗಂಧರ್ವ ಸನಕಾದಿ
ಲೋಕ ಚಕ್ಷು ಸೀತಾಂಶು ಉದಿಸಿದರು
ಏಕಾಂತನು ವಾಯುನಂದನ
ಪಾಕಶಾಸನ ಸೌಮ್ಯ ಗುರು ಕವಿ
ನಾಕಜನ ಮಿಗಿಲಾದ ಭಕ್ತರು
ಏಕಗುಣವಾರಂಭಿಸಿ ಅ
ನೇಕ ಗುಣದಲಿ ಭಜಿಸುತಿಪ್ಪುದಾ||7||
ಮೂರು ಪ್ರಸಾದ ಮಹಿಮೆಯ
ಸಾರಿದರೆ ನೆಲೆದೋರದು ಕಂ
ಸಾರಿ ಚಿನ್ಮಯ ಲೀಲೆಗೆ ಮತ್ತಾರಾದರು ಗಣ್ಯಮಾಳ್ಪರೆ
ಧಾರುಣಿಲಿ ಮಧ್ಯದಲಿದಕೆ ಎ
ದಿರುಗಾಣೆನು ಎಲ್ಲಿ ಚರಿಸಲು
ಮಾರುತನು ತಾನೊಬ್ಬ ಬಲ್ಲ ವಿ
ಸ್ತಾರವಿದರ ವಿಚಾರ ಮತಿಯಲಿ||8||
ಧೀರ ಜಗದೋದ್ಧಾರ ರಿಪು ಸಂ
ಹಾರ ನಾನಾವತಾರ ನವನೀತ
ಚೋರ ಜಾರ ಶಿರೋಮಣಿ ಶ್ರೀ
ನಾರಿಯರರಸನೆ ತಾ ಭಕ್ತ ಚ
ಕೋರ ಚಂದ್ರಮ ಪೂರ್ಣ ಸುಂದರ
ಸಾರ ಭವಾರ್ಣವತಾರ ಕಾರಣ
ವೀರ ವಿತರಣ ಶೂರನೆನಿಪನ್ನ
ದ್ವಾರದಲಿ ಬಂದು ಸ್ತುತಿಸಿದೆನು ನಿಂದೂ ||9||
ಈ ವೈಲಕ್ಷಣವುಳ್ಳ ದೊರೆತನ
ಈ ವೈಭವ ಸರ್ವೋತ್ತಮನೆಂಬದು
ಈ ವೈಭೋಗ ಸಾಕಲ್ಯವಾಗಿದೆ
ಈ ವೈಯಾರವು ಈತಗಲ್ಲದೆ
ಈ ವೈಕುಂಠನ ನೋಡುವುದು ಮಹಾ
ಈ ವೈದಿಕದ ಭಾಗ್ಯಕ್ಕೆಣೆಯೆ
ಈ ವೈಧಾತ್ರಿಗೆಯಿವನು ಪೇಳಿದ
ಈ ವೈಚಿತ್ರವ ಕೇಳಿ ಮನದಲಿ ||10||
ರನ್ನಮಯ ಕಿರೀಟ ಕುಂಡಲ
ಕರ್ಣ ಕಸ್ತೂರಿನಾಮ ಪಣೆಯಲಿ
ಕೆನ್ನೆ ಚಂಪಕ ನಾಸದಂತ ಪ್ರ
ಸನ್ನ ವದನಾಂಭೋಜಲೋಚನಾ
ಚಿನ್ನಸರ ಉಡುದಾರ ಸರಿಗೆ ಮೋ
ಹನ್ನ ಪೀತಾಂಬರ ನೂಪುರಗೆಜ್ಜೆ
ಸನ್ನಿಧಿಗೆ ನಡೆತಂದು ದೇವವರೇ
ಣ್ಯನಂಘ್ರಿಯ ನೆನೆದೆ ಚೆನ್ನಾಗಿ ||11||
ಮೆರೆವ ಉತ್ಸವ ವಾಹನಂಗಳು
ನೆರೆದ ಪ್ರಜೆದಟ್ಟಡಿಯಾಗಿದೆ ನೋಡಿ
ಎರಡೊಂದು ವಿಧದವರುಯಿಲ್ಲಿಗೆ
ಬರುವರೈ ಅವರವರ ತಕ್ಕದು
ಹರಿಯ ಫಲವನು ಕೊಡುವನಿಲ್ಲದೆ
ಅರಮರೆ ಇಲ್ಲಿದಕೆ ಎಂದಿಗು
ಮೊರೆವ ನಾನಾ ವಾದ್ಯ ರಭಸ ವಿ
ಸ್ತರಿಸ ಬಲ್ಲೆನೆ ನೂತನೂತನಾ ||12||
ರಥದ ಸಂಭ್ರಮವಾರು ಬಲ್ಲರು
ಪ್ರತಿಗಾಣೆ ಈ ಪೃಥ್ವಿಯೊಳಗೆ ಅ
ಪ್ರತಿ ಸಾಹಸಮಲ್ಲ ತನ್ನಯ
ಸತಿಯೊಡನೆ ಪರುಠವಿಸಿ ಪೊಳೆವುತ್ತ
ಚತುರ ಬೀದಿಯ ಸುತ್ತಿ ಸುಮನಸ
ತತಿಯ ಸಂಗಡ ಬರುವ ಭರ ಉ
ನ್ನತವ ಗುಣಿಸುತ್ತ ನಲಿನಲಿದು ಅ
ಚ್ಯುತನ ಕ್ರೀಡೆಯ ಸ್ಮರಿಸಿ ನಮೋ ಎಂಬೆ||13||
ರಾಜರಾಜೇಶ್ವರ ನಿರಂತರ
ರಾಜಿಸುತಿಪ್ಪ ಬಗೆಬಗೆ ಸಂಪೂಜೆಯಲಿ ರಾಜೋಪಚಾರದಿ
ಮೂಜಗದೊಳು ಈ ನಿಧಿಯಲಿದ್ದ
ಸೋಜಿಗವೆ ಮತ್ತೆಲ್ಲಿಯಿಲ್ಲವು
ರಾಜಶೇಖರ ಬಲ್ಲವನೊಬ್ಬನೆ
ಮಾಜದಲೆ ಸಜ್ಜನರು ಸತ್ಕರ್ಮ
ಬೀಜಮಂದಿ ಮಾಡಿಬಿಡಲೆ ||14||
ದರ ಸುದರಶನ ಪಾಣಿ ತನ್ನ ಸಂ
ದರುಶನವೆಮಗಿತ್ತು ಘನ ಆ
ದರ ಪಾಲಿಸಿ ಸಂಚಿತಗಾಮಿ
ಪಠಿಸಿ ಪ್ರಾರಬ್ಧವೇ ತೀರಿಸಿ
ಕರುಣದಿಂದಲಿ ದಿವ್ಯರೂಪದ
ಗುರುತು ತೋರುವ ಅಂತರಂಗದಿ
ಪರಮಪಾವನ ವಿಜಯವಿಠ್ಠಲ
ಪೊರೆವ ಪ್ರೀತಿಲಿ ಬಂದು ಮರಿಯದೆ||15||