ನೀನಲ್ಲದಿನ್ನಾರು ಚಿರಬಂಧು ಎನಗೆ
ನಿನ್ನನ್ನೆ ಕರೆಯುತಿಹೆ ಹೃದಯದೇಗುಲಕೆ||
ಕಾತರದ ಅಳಲಿನಲಿ ಪರಿಪೂತ ಹೃದಯವದು
ಕ್ಷೇತ್ರವೆನೆ ಆಗಿಹುದು ದಕ್ಷಿಣೇಶ್ವರವು|
ಜನ್ಮಜನ್ಮಾಂತರದ ಸಂಸ್ಕಾರತರುರಾಜಿ
ಪಂಚವಟಿಯಂದದಲಿ ಮಿಗೆ ಒಪ್ಪುತಿಹುದು||
ಹಗಲಿರುಳು ಎನ್ನೆದೆಯ ಹಂಬಲಿನ ಹೊನಲದುವೆ
ಜಗವ ಪಾವನಗೈವ ಗಂಗೆಯಾಗಿಹುದು|
ಜೀವಿಗಳ ಎದೆಯಲ್ಲಿ ಅನವರತ ನೆಲೆಸಿರುವ
ದೇವತೆಯೆ ಇಲ್ಲೀಗ ಮಾತೆ ಭವತಾರಿಣೀ||
ಹೇ ದಿವ್ಯ ಅರ್ಚಕನೆ ಪಂಚವಟಿಪ್ರಿಯನೆ
ಭವತಾರಿಣೀತನಯ ಸುರನದಿಯ ಭಕ್ತ|
ಬಂದಿಲ್ಲಿ ಎಚ್ಚರಿಸು ಪ್ರೇಮಮಯಿ ಜನನಿಯನು
ಬಂಧನವು ಹರಿಯುವುದು ಮಾತೆಯೊಲುಮೆಯಲಿ||
—–ಸ್ವಾಮಿ ತದ್ರೂಪಾನಂದ