ನಿನ್ನ ಬಾಳಿನ ಹೊಲವು ಪಾಳು ಬಿದ್ದಿಹುದಲ್ಲೊ
ಕೃಷಿಗೈಯಲೂ ಕೂಡ ತಿಳಿಯದಿರುವೆ|
ಎಂಥ ಹೊನ್ನನು ಬೆಳೆದು ತೆಗೆಯಬಹುದಾಗಿತ್ತೊ
ಕೆಲವು ದಿನ ಮೈಮುರಿದು ದುಡಿದಿದ್ದರೆ||
ಈಗಲಾದರು ತಾಯ ಶ್ರೀನಾಮವೆಂತೆಂಬ
ಬೇಲಿಯನು ಕಟ್ಟಿ ನೀ ಕಾಯ್ದುಕೊಳ್ಳೊ|
ಅದಕಿಂತ ಬಲವಾದ ಕಾವಲಿನ್ನಾವುದಿದೆ
ಮೃತ್ಯುವೂ ನಿನ್ನ ಬಳಿ ಬರಲಾರನೊ||
ಇಂದೊ ನಾಳೆಯೊ ಹೊಲವ ಹೊಲದೊಡೆಯಗೊಪ್ಪಿಸುವ
ಮುನ್ನವೇ ಎಚ್ಚೆತ್ತು ಬೆಳೆಯ ತೆಗೆಯೊ|
ಗುರುವಿತ್ತ ಮಂತ್ರವನು ಬೀಜವಾಗಿಸಿ ಬಿತ್ತಿ
ಪ್ರೇಮವಾರಿಯ ಹೊಯ್ದು ಹಸನುಗೊಳಿಸೊ|
ನಿನಗೆ ಈ ಕೆಲಸವೂ ಕಷ್ಟವಾದರೆ ಹೇಳು
ರಾಮಪ್ರಸಾದನಿದೊ ನೆರವಿಗಿಹನೊ||
—-ವಚನವೇದ