ನಾನಾರ ದೂಷಿಸಲಿ, ನಾನೆ ತೋಡಿದ ಕೂಪ-
ದಾಳದಲಿ ನಾನಾಗಿ ಮುಳುಗುತಿಹೆನು|
ಅರಿವರ್ಗಗಳ ಹಿಡಿದು ನಿನ್ನ ಸುಕ್ಷೇತ್ರದಲಿ
ನಾನೆ ಈ ಬಾವಿಯನು ತೋಡಿರುವೆನು|
ಕಾಲರೂಪದ ಕರಿಯ ನೀರೆದ್ದು ನುಗ್ಗುತಿದೆ
ಓ ತಾಯಿ ನಾ ನಿನಗೆ ಶರಣೆನುವೆನು|
ನಾನೆಯೇ ನನಗೆ ಹಗೆ, ಹೇಗೆ ತಡೆಯಲಿ ಹೇಳು
ಮೇಲೆದ್ದು ನುಗ್ಗುವೀ ಕಾಳಜಲವ ?
ಎನ್ನ ಎದೆಯುದ್ದಕೂ ತುಂಬಿಕೊಂಡಿತು ನೀರು,
ನೀನೊಬ್ಬಳೇ ರಕ್ಷೆ, ನಿನ್ನೊಳಗೆ ಈ ಭಿಕ್ಷೆ,
ದಾಟಿಸಾಚೆಯ ದಡಕೆ ಈ ಶಿಶುವನು|
—ವಚನವೇದ