ನನ್ನ ಹೃದಯದ ದಿವ್ಯ

ನನ್ನ ಹೃದಯದ ದಿವ್ಯಸೂತ್ರಧಾರಿಣಿ ನೀನು
ಮಡಿಲ ತೊಟ್ಟಿಲೊಳಿಟ್ಟು ಪಾಲಿಸಿರುವೆ|
ನಾನಪಾತ್ರನು ತಾಯಿ, ನಿನ್ನ ಒಲವಿನ ಕೃಪೆಗೆ
ಆದರೂ ಎನಿತೊಂದು ಕರುಣೆ ನಿನಗೆ||

ನನ್ನ ಮೇಲೆನಿತೊಂದು ವಾತ್ಸಲ್ಯವಿದೆ ನಿನಗೆ
ನೇವರಿಸಿ ಕೈಹಿಡಿದು ನಡೆಸುತಿರುವೆ|
ಮೃದುನುಡಿಗಳಮೃತವನು ಕಿವಿಗಳಿಗೆ ಕರೆಯುತ್ತ
ದಿವ್ಯಮಧುವನು ನನಗೆ ಕುಡಿಸುತಿರುವೆ||

ದೋಷವರಸದ ಹಿರಿಯ ತಾಯ್ತನದ ಮೂರ್ತಿ ನೀ
ಕಷ್ಟಸಂಕಟದಿಂದ ರಕ್ಷಿಸಿರುವೆ|
ನಾನು ನಿನ್ನವನೆಂಬ, ನೀನು ನನ್ನವಳೆಂಬ
ಹಿರಿಯ ತತ್ತ್ವವನೀಗ ಅರಿಯುತಿರುವೆ||

ಓ ತಾಯಿ ನಾ ನಿನ್ನ ಹಾಲುಂಡು ಪುಷ್ಟಿಯಲಿ
ನಿನ್ನ ಆಣತಿಯಂತೆ ಋಜುಪಥದಲಿ|
ನಡೆನಡೆದು ಭಕ್ತಿಯಲಿ ‘ಜೈ ಬ್ರಹ್ಮಮಯಿ’ ಎಂದು
ಹಾಡಿ ಕುಣಿಯುವೆನಿನ್ನು ದಿನದಿನದಲಿ||

                                               —ವಚನವೇದ

1 thought on “ನನ್ನ ಹೃದಯದ ದಿವ್ಯ”

  1. ದತ್ತಾತ್ರೇಯ ಶರ್ಮ ಅಹಂಭೋ ಅಭಿವಾದಯೇ ॥

    ಧನ್ಯಧನ್ಯವಿದೇ ಸುದಿನ !

    ಧನ್ಯವಾದಗಳು ॥

    ಶುಭವಾಗಲಿ ॥

    ಓಂ ಶ್ರೀ ಸದ್ಗುರು ಲಕ್ಷ್ಮೀನೃಸಿಂಹ ಕೃಪಾಕಟಾಕ್ಷ ಸಿದ್ಧಿರಸ್ತು ॥

Leave a Comment

Your email address will not be published. Required fields are marked *