ದೇವರ ದೇವ ನಿನ್ನ ಬಲವಲ್ಲದೆ

ದೇವರ ದೇವ ನಿನ್ನ ಬಲವಲ್ಲದೆ ಮತ್ತೆ
ಆವ ಗ್ರಹಗಳಿಂದಲಿ ಉಂಟು ಎನಗೆ

ಇಂದು ನಿನ್ನ ನೆನಹು ಇಂದು ಬಲವೊ ಅರ
ವಿಂದ ಪದ ನೋಡುವದು ಅರ್ಕ ಬಲವು
ವಂದನ ಗೈದು ಮಂತ್ರಿ ಬಲವೋ ಎನಗೆ
ನಿಂದು ಕೊಂಡಾಡುವದು ಕಾವ್ಯ ಬಲವೊ ||1||

ಆರಾಧನೆ ಮಾಡುವುದು ಅಂಗಾರಕನ ಬಲವೊ
ಸಾರಿ ಪೇಳುವದೆನಗೆ ಸೌಮ್ಯ ಬಲವೊ
ಕಾರುಣ್ಯ ಕಡುಸೋನೆ ಎನಗೆ ಶೌರಿಬಲವೊ
ಹಾರೈಸಿ ಹಿಗ್ಗುವದು ರಾಹು ಬಲವೊ ||2||

ಕೇಳುವ ಕಥಾಶ್ರವಣ ಕೇತು ಬಲವೊ ಎನಗೆ
ವಾಲಗ ಮಾಡುವದು ತಾರಾಬಲವೊ
ಮೂಲೋದರಸು ಸಿರಿ ವಿಜಯವಿಠ್ಠಲ ನಿನ್ನ
ಆಳಾಗಿ ಬಾಳುವದು ಸರ್ವಬಲವು ||3||

Leave a Comment

Your email address will not be published. Required fields are marked *