ದೇವದೇವನ ನಿಜವನರಿಯಲು

ದೇವದೇವನ ನಿಜವನರಿಯಲು
ಮನವು ತೊಳಲುತ ಬಳಲಿದೆ|
ಬೀಗಮುದ್ರೆಯನಿಟ್ಟ ಕೋಣೆಯೊ-
ಳಲೆವ ಮರುಳನ ತೆರನಿದೆ||

ದಿವ್ಯ ಪ್ರೇಮಕೆ ದೊರೆವನವನು
ಶ್ರದ್ಧೆಗಲ್ಲದೆ ಒಲಿಯನು|
ವೇದಶಾಸ್ತ್ರ ಪುರಾಣದರ್ಶನ-
ದಾಚೆಗೇ ನಿಂತಿರುವನು||

ಭಕ್ತಿಗೊಲಿಯುವ ಹೃದಯದಮೃತಾ-
ನಂದರೂಪನು ಎಂಬರು|
ಇದನರಿತೆ ಆ ಯೋಗಿವರ್ಯರು
ಯುಗಯುಗವು ತಪಗೈದರು||

ಭಕ್ತಿಯೆಚ್ಚರಗೊಳಲು ಎದೆಯಲಿ
ಅವನೆ ನಿನ್ನನು ಸೆಳೆವನು|
ಈ ರಹಸ್ಯವ ಜಗದ ಸಂತೆಯ
ಜನ ಸಮೂಹಕೆ ತಿಳಿಸೆನು||

ಶ್ರೀ ಪ್ರಸಾದನು ನುಡಿವನೀತೆರ
“ಮಾತೃಭಾವದಿ ನೆನೆವೆನು|
ನನ್ನ ಸೂಚನೆಯರಿತು ನೀವೇ
ತಿಳಿಯಿರಾತನ ನಿಜವನು”||

                              —-ವಚನವೇದ

Leave a Comment

Your email address will not be published. Required fields are marked *