ದಾಸನ ಮಾಡಿಕೊ

ದಾಸನ ಮಾಡಿಕೊ ಎನ್ನ-ಸ್ವಾಮಿ
ಸಾಸಿರನಾಮದ ವೆಂಕಟರಮಣ ||
ದುರುಬುದ್ಧಿಗಳನ್ನೆಲ್ಲ ಬಿಡಿಸೋ-
ನಿನ್ನಕರುಣಕವಚವೆನ್ನ ಹರಣಕೆ ತೊಡಿಸೋ |
ಚರಣಸೇವೆ ಎನಗೆ ಕೊಡಿಸೋ-ನಿನ್ನ
ಕರಪುಷ್ಪವನೆನ್ನ ಶಿರದಲಿ ಮುಡಿಸೋ ||
ದೃಢಭಕ್ತಿ ನಿನ್ನಲಿ ಬೇಡಿ-ನಾ- ನಡಿಗೆರಗುವೆನಯ್ಯ ಅನುದಿನ ಪಾಡಿ |
ಕಡೆಗಣ್ಣಲೇಕೆನ್ನ ನೋಡಿ-ಬಿಡುವೆ
ಕೊಡು ನಿನ್ನ ಧ್ಯಾನವ ಮನಶುಚಿಮಾಡಿ ||
ಮರೆಹೊಕ್ಕವರ ಕಾವ ಬಿರುದು-ಎನ್ನ ಮರೆಯದೆ ರಕ್ಷಣೆ ಮಾಡಯ್ಯ ಪೊರೆದು |
ದುರಿತಗಳೆಲ್ಲವ ತರಿದು-ಸಿರಿ ಪುರಂದರವಿಠಲ ಎನ್ನನು ಪೊರೆದು ||
-ಪುರಂದರದಾಸ

Leave a Comment

Your email address will not be published. Required fields are marked *