ದಾಸನ ಮಾಡಿಕೊ ಎನ್ನ

ದಾಸನ ಮಾಡಿಕೊ ಎನ್ನ—ಸ್ವಾಮಿ
ಸಾಸಿರನಾಮದ ವೆಂಕಟರಮಣ||

ದುರುಬುದ್ಧಿಗಳನೆಲ್ಲ ಬಿಡಿಸೋ—ನಿನ್ನ
ಕರುಣಕವಚವೆನ್ನ ಹರಣಕೆ ತೊಡಿಸೋ|
ಚರಣಸೇವೆ ಎನಗೆ ಕೊಡಿಸೋ—ನಿನ್ನ
ಕರಪುಷ್ಪವನೆನ್ನ ಶಿರದಲಿ ಮುಡಿಸೋ||

ದೃಢಭಕ್ತಿ ನಿನ್ನಲ್ಲಿ ಬೇಡಿ —ನಾ –
ನಡಿಗೆರಗುವೆನಯ್ಯ ಅನುದಿನ ಪಾಡಿ|
ಕಡೆಗಣ್ಣಲೇಕೆನ್ನ ನೋಡಿ —ಬಿಡುವೆ
ಕೊಡು ನಿನ್ನ ಧ್ಯಾನವ ಮನ ಶುಚಿಮಾಡಿ||
ಮರೆಹೊಕ್ಕವರ ಕಾವ ಬಿರುದು—ಎನ್ನ
ಮರೆಯದೆ ರಕ್ಷಣೆ ಮಾಡಯ್ಯ ಪೊರೆದು||
ದುರಿತಗಳೆಲ್ಲವ ತರಿದು— ಸಿರಿ
ಪುರಂದರವಿಟ್ಠಲ ಎನ್ನನು ಪೊರೆದು||

                                         —ಪುರಂದರದಾಸ

Leave a Comment

Your email address will not be published. Required fields are marked *