ತಾಯಿ ದುರ್ಗೆಯ ನಿಜವನರಿಯುವ

ತಾಯಿ ದುರ್ಗೆಯ ನಿಜವನರಿಯುವ
ದೀರರಾರೋ ಜಗದೊಳು|
ಆರು ದರುಶನ ವೇದಶಾಸ್ತ್ರ
ಪುರಾಣವರಿಯದು ಅವಳನು||

ಯೋಗಿಹೃದಯದ ದಿವ್ಯನಿತ್ಯಾ-
ನಂದರೂಪಿಣಿ ಆಕೆಯು|
ತನ್ನ ಆನಂದದಲಿ ತಾನೇ
ಜೀವರೆದೆಯೊಳಗಿರುವಳು||

ಸಕಲಬ್ರಹ್ಮಾಂಡವನು ಬಸಿರಲಿ
ಧರಿಸಿ ನಿತ್ಯವು ಪೊರೆವಳು|
ಮೂಲಾಧಾರ ಸಹಸ್ರಾರದಿ
ಮುನಿಗಳವಳನು ನೆನೆವರು||

ಶಿವನ ಹೊರತಿನ್ನಾರು ಅರಿಯರು
ಅವಳ ದಿವ್ಯಸ್ವರೂಪವ|
ಪದ್ಮವನದಲಿ ಹಂಸರೂಪನ
ಜೊತೆಗೆ ನಲಿಯುವ ಮಾಟವ||

ಕಡಲನೀಜುವೆನೆಂಬ ಮರುಳನ
ಕಲ್ಪನೆಗೆ ನಗುವಂದದಿ|
ಇಂಥ ತಾಯಿಯ ತಿಳಿದೆನೆಂದರೆ
ಶ್ರೀಪ್ರಸಾದನು ನಗುವನು||

ಕುಬ್ಜನಾದವ ಮುಗಿಲಚಂದ್ರನ
ಹಿಡಿವ ಯತ್ನದ ತೆರದಲಿ|
ಬುದ್ಧಿಯರಿತರು ಹೃದಯವರಿಯದು
ತಾಯಿ ದುರ್ಗೆಯ ನಿಜವನು||

                                  —ವಚನವೇದ

Leave a Comment

Your email address will not be published. Required fields are marked *