ಡಂಗುರ ಹೊಡಿಸಿದ ಯಮನು |
ಪಾಪಿ ಹೆಂಗೆಳೆಯವರ ತಂದು ಭಂಗಪಡೆಸಿದರೆಂದು
ಮೃತಿಕೆ ಶೌಚÀದ ಗಂಧ ಪೋಗುವಂತೆ |
ನಿತ್ಯದಲ್ಲಿ ಸ್ನಾನ ಮಾಡದೆ ಸುಮ್ಮನೆ ||
ತೊತ್ತು ಒಡತಿಯಾಗಿ ಮುಖವ ತೊಳಿಯದಿಪ್ಪ |
ಕತ್ತೆ ಹೆಂಗಸರನು ಕಡಿದು ಕೊಲ್ಲಿರೊ ಎಂದು ||1||
ಪತಿಗೆರಗದೆ ಗೃಹಕೃತ್ಯ ಮಾಡುವಳ |
ಮತಿವಿರದೆ ಚಂಚಲದಿಪ್ಪಳ ||
ವ್ರತಗೇಡಿ ಅನ್ಯರ ಮಾತಿಗೆ ಸೋಲುವ |
ಪತಿತಳ ಎಳೆತಂದು ಹತವ ಮಾಡಿರೆಂದು ||2||
ಒಬ್ಬರಿಬ್ಬರ ಕೂಡ ಸಖತನ ಮಾಡುವಳ
ಒಬ್ಬೊಬ್ಬರಿಗೆ ಮೈಯಿತ್ತು ಪಾಡುವಳೆ ||
ಅಬ್ಬರದ ಸೊಲ್ಲನು ವಿಸ್ತರಿಸುವಳ |
ದಬ್ಬಿರೊ ವೃಶ್ಚಿಕದ ಕುಂಡದೊಳಗೆ ಎಂದು ||3||
ವಸನವಿಲ್ಲದೆ ಮೈಯ ತೊಳಕೊಂಬೊ ಪಾಪಿಯ |
ಹಸಿವೆಯಾದರೆ ಮಲಗಿಕೊಂಡಿಪ್ಪಳ
ಅಶನ ಭಕ್ಷಿಸುವಾಗ ಅಳಲುವ ದುಃಖಿಯ
ಪೆಸರಿಯ ತರೆ ಕೆಳಗಾಗಿ ಬಾಧಿಸರೆಂದು ||4||
ಬಿಗಿದು ಪುಟವ ಹಾಕಿ ಬದಿ ಬಗಲ ಮುಚ್ಚದೆ |
ನಗುವಳು ಅವರಿವರೆಂದರಿಯದೆ ||
ಬಗೆ ಬಗೆ ವಯ್ಯಾರ ನಿಜವಾಗಿ ತೋರುವ |
ಅಧಮ ನಾರಿಯೆ ತಂದು ಅರಿದು ಕೊಲ್ಲಿರೊ ಎಂದು ||5||
ಪಾಕದ ಪದಾರ್ಥ ನೋಡಿ ಇಡದವಳ |
ಲೋಕವಾರ್ತೆಗೆ ಮನೆಯ ಜರಿದು ಪತಿಗೆ ||
ಬೇಕಾದವರ ಜರಿದು ಬಹುಪುಷ್ಪ ಮುಡಿದಿಪ್ಪ
ಕಾಕಿಯ ಎಳೆತಂದು ಕಣ್ಣು ಕಳಿಚಿರೆಂದು ||6||
ಪಂಕ್ತಿ ಭೇದವ ಮಾಡಿ ಬಡಿಸುವ ಪಾಪಿಯ |
ಕಾಂತ ಕರೆದಾಗ ಪೋಗದವಳ ||
ಸಂತರ ನೋಡಿ ಸೈರಿಸದಿಪ್ಪ ನಾರಿಯ |
ದಂತಿಯ ಕೆಳಗೆ ಹಾಕಿ ತುಳಿಸಿ ಕೊಲ್ಲಿರೊ ಎಂದು ||7||
ವಿಧವೆಯ ಸಂಗಡ ಇರಳು ಹಗಲು ಇದ್ದು |
ಕದನ ತೆರೆದು ನೆರಳು ನೋಡುವಳ ||
ಕದದ ಮುಂದೆ ಕುಳಿತು ತಲೆ ಬಾಚಿ ಕೊಂಬುವಳ |
ಕುದಿಸಿ ಕಟಾಹದೊಳು ಮೆಟ್ಟಿ ಸೀಳಿರೊ ಎಂದು ||8||
ಆವದಾದರು ತೊರೆದು ಪತಿದೈವವೆಂದರಿದು |
ಸೇವೆಯ ಮಾಡಿ ಸುಜನರಿಗೆ ಬೇಗ ||
ದೇವೇಶ ವಿಜಯವಿಠ್ಠಲ ತಿರುವೆಂಗಳ |
ಕಾಯುವನು ದಯದಿಂದ ಕೈವಲ್ಯ ಕಲ್ಪಿಸಿ ||9||