ಜೇನಿನ ಗೂಡೊಳು

ಜೇನಿನ ಗೂಡೊಳು ಹುದುಗಿಹ ಮಧುವೋಲ್
ದೇವನ ಹೃದಯದಿ ಹುದುಗಿಹ ಕರುಣೆಯು|
ದೀನರ ಆರ್ತರ ಕೂಗಿನ ಹೊಡೆತಕೆ
ಶಾರದೆ-ರೂಪದಿ ಸೂಸಿತು ಹರಿಯಿತು||

ಮಾನಸ-ಸರಸಿಜ-ಮಂದಾಕಿನಿ-ಜಲ
ಭಾರತ-ಭೂಮಿಯ ಪಾವನಗೈದರೆ|
ಶಾರದರೂಪೀ ಕರುಣಾಗಂಗೆಯು
ವಿಶ್ವಕೆ ತಂಪಿನ ಸುಧೆಯನು ನೀಡಿತು||

ತನ್ನನು ಕಡಿವಗು ತಣ್ಣನೆ ನೆರಳನು
ನೀಡುವ ವೃಕ್ಷದ ತೆರದಲಿ ಶಾರದೆ|
ತನ್ನನು ಹಿಂಸಿಸಿ ಬಾಳಲು ಬಯಸಿದ
ಮೂರ್ಖರ ಮನ್ನಿಸಿ ಹರಸಿದಳಲ್ಲವೆ||

ಸರ್ವವಿದ್ಯೆಗಳ ಮೂರುತಿ ನೀನು
ಭೋಗದ ಮೋಕ್ಷದ ದಾತೆಯು ನೀನೇ|
ಎನ್ನಯ ಹೃದಯದಿ ನಿನ್ನಯ ಭಕ್ತಿಯ
ತುಂಬಿಸು ಕೂಡಲೆ ಕೃಪೆಯನು ತೋರುತ||

ನಾನೂ ನಿನ್ನಯ ಪುತ್ರನು ತಾಯೇ
‘ದುರುಳನು ಈತನು, ಪುತ್ರನೆ!’ ಎನ್ನದಿರು|
ದುರುಳ ಕುವರರಿದ್ದರು ಈ ಲೋಕದಿ
ದುರುಳ ಮಾತೆಯನು ಎಂದಿಗು ಕಾಣೆವು||

ಹಗಲೂ ಇರುಳೂ ಪರರನು ಹಳಿಯುತ
ಬಾಳನು ಸವೆಸುತಲಿರುತಿಹ ಮರ್ತ್ಯರೆ
ಬನ್ನಿರಿ ಬನ್ನಿರಿ ಎಲ್ಲರು ಇಲ್ಲಿಗೆ
ಕೇಳಿರಿ ಜನನಿಯ ಚರಮಾದೇಶವ||

‘ಸತತವು ವ್ರಣವನೆ ಬಯಸುವ ಮಕ್ಷಿಕೆ,
ಮಧುವನನವರತ ಹೀರುವ ಮಧುಕರ-
ಆವುದು ಅನುಕರಣೀಯವು ಎಂಬುದ
ಅರಿಯುತ ಮಧುಮಯವಾಗಿಸಿ ಜೀವನ!’||

                                                 —-ಸ್ವಾಮಿ ಹರ್ಷಾನಂದ

Leave a Comment

Your email address will not be published. Required fields are marked *