ಜಯ ಜಾನಕೀಕಾಂತ ಜಯ ಸಾಧುಜನವಿನುತ|
ಜಯತು ಮಹಿಮಾವಂತ ಜಯ ಭಾಗ್ಯವಂತ||
ದಶರಥಾತ್ಮಜ ವೀರ ದಶಕಂಠಸಂಹಾರ
ಪಶುಪತೀಶ್ವರಮಿತ್ರ ಪಾವನಚರಿತ್ರ|
ಕುಸುಮಬಾಣಸ್ವರೂಪ ಕುಶಲಕೀರ್ತಿಕಲಾಪ
ಅಸಮಸಾಹಸಶಿಕ್ಷ ಅಂಬುಜದಳಾಕ್ಷ||
ಸಾಮಗಾನವಿಲೋಲ ಸಾಧುಜನಪರಿಪಾಲ
ಕಾಮಿತಾರ್ಥವಿದಾತ ಕೀರ್ತಿಸಂಜಾತ|
ಸೋಮಸೂರ್ಯಪ್ರಕಾಶ ಸಕಲ ಲೋಕಾಧಿಶ
ಶ್ರೀಮಹಾರಘುವೀರ ಸಿಂಧುಗಂಭೀರ||
ಸಕಲಶಾಸ್ತ್ರವಿಚಾರ ಶರಣಜನಮಂದಾರ
ವಿಕಸಿತಾಂಬುಜವದನ ವಿಶ್ವಮಯಸದನ|
ಸುಕೃತಮೋಕ್ಷಾಧೀಶ ಸಾಕೇತಪುರವಾಸ
ಭಕ್ತವತ್ಸಲರಾಮ ಪುರಂದರವಿಟ್ಠಲ||
—ಪುರಂದರದಾಸ