ಜಯತು ಜಯತು ರಾಮಕೃಷ್ಣ ಜಯತು ಭುವನಮಂಗಲ
ಜಯತು ತಾಯಿ ಮಹಾಮಾಯಿ ಶಾರದೇ ಸುನಿರ್ಮಲ|
ಜಯತು ಶ್ರೀವಿವೇಕಾನಂದ ತಮವ ಕಳೆವ ಭಾಸ್ಕರ
ಶ್ರೀಗುರುವಿನ ಆತ್ಮಪುತ್ರ ಬ್ರಹ್ಮಾನಂದ ಸಾಗರ||
ಜಯತು ಜಯತು ಪ್ರೇಮಾನಂದ- ಪ್ರೇಮಾಮೃತ ಸಿಂಚನ
ತ್ಯಾಗವ್ರತನೆ ಶಿವಾನಂದ ಗುರುಶಕ್ತಿಯ ದರ್ಶನ|
ಕಾಮನೆಗಳ ಗೆದ್ದ ಯೋಗಿ ಜಯತು ಯೋಗಾನಂದನೆ
ಧೀರ-ವೀರ ನಿರಂಜನನೆ ನಿನ್ನ ಪದಕೆ ವಂದನೆ||
ಗುರುಸೇವೆಯ ಮೂರ್ತರೂಪ ರಾಮಕೃಷ್ಣಾನಂದನೆ
ಅಕ್ಷರದಲಿ ನೆಲೆನಿಂದಿಹ ಅದ್ಭುತ ಆನಂದನೆ|
ತಾಪಸಿ ನೀ ಅಭೇದಾನಂದ ಜ್ಞಾನಮೂರ್ತಿ ಜಯ ಜಯ
ದೇಹಭಾವವಳಿದ ಯತಿ ತುರೀಯಾನಂದ ನಿರ್ಭಯ||
ತಾಯ ಹಿತವ ಸತತ ಕಾಯ್ದ ಶರಚ್ಚಂದ್ರ ವಾಸುಕಿ
ಗಂಗಾಧರನೆ ಜೀವಸೇವೆಯಲ್ಲಿ ಶಿವನ ಸಮ್ಮಖಿ|
ಜಯತು ಜಯತು ಹರಿಪ್ರಸನ್ನ ಪ್ರಸನ್ನಾತ್ಮ ಸಂತತ
ಶ್ರೀಗೋಪಾಲ ನಿನ್ನ ಇರವೆ ತಾಯ ಚರಣಕರ್ಪಿತ||
ಬಾಲಕನೊಲು ಸರಳ-ಶಾಂತ ಶ್ರೀಸುಬೋಧಾನಂದನೆ
ತಾಯ ಪದದಿ ತನ್ಮಯ ನೀ ಶಾರದಾಪ್ರಸನ್ನನೆ|
ಕಥಾಮೃತದ ಹೊನಲ ತಂದ ಗುಪ್ತ ಶ್ರೀಮಹೇಂದ್ರನೆ
ಶ್ರದ್ಧೆಬಲದಿ ಕೊಳೆಯ ತೊಳೆದ ಶ್ರೀಗಿರೀಶಚಂದ್ರನೆ||
ತ್ಯಾಗದುರಿಯ ಹೆಡೆಯೆತ್ತಿದ ದುರ್ಗಾಚರಣನಾಗನೆ
ಸೇವೆಯಲ್ಲೆ ಸಾರ್ಥಕತೆಗೆ ಸಂದಿಹ ಬಲರಾಮನೆ|
ನಿಮ್ಮನೆನಹು ನಮ್ಮ ಮನವ ಬೆಳಗುತಿರಲಿ ಸರ್ವದಾ
ನೀವೆ ನಮ್ಮ ನಿತ್ಯಸ್ಫೂರ್ತಿ–ಸತ್ಯಸಿರಿಯ ಸಂಪದ||
—ಮುರಳೀಧರ