ಕೊಟ್ಟವರು ಸರಿಯೆ| ಕೊಡದೆ
ಬಿಟ್ಟವರು ಸರಿಯೆ||
ಇಕ್ಕಿದವರಿಗುಂಟು| ಮದದಲಿ
ಸೊಕ್ಕಿದರೇನುಂಟು|
ರಕ್ಕಸಾಂತಕ ಲಕುಮಿಪತಿಯ ಮರೆ-
ಪೊಕ್ಕವರಾದ ಶಿಷ್ಟಭಕುತರಿಗೆ||
ದೊರೆಯಾದರು ಸರಿಯೆ| ನಮಗೆ
ತಿರುಕನಾದರು ಸರಿಯೆ|
ಸರಸವಿರಸದಿಂ ನುಡಿದರೇನು ನರ-
ಹರಿಪದಕಮಲವ ನಿರುತ ಭಜಿಪರಿಗೆ||
ಪುಟ್ಟಿಸಿದ ಪ್ರಭುವು| ನಮಗೆ
ಹೊಟ್ಟೆಗೆ ಕೊಡದಿಹನೆ|
ಬೆಟ್ಟದೊಡೆಯ ನಮ್ಮ ಪುರಂದರವಿಟ್ಠಲನ
ಗಟ್ಟಿಯಾಗಿ ನಂಬಿದ ಭಕುತರಿಗೆ||
—-ಪುರಂದರದಾಸ