ಕೈಲಾಸವಾಸ ಗೌರೀಶ ಈಶ

ಕೈಲಾಸವಾಸ ಗೌರೀಶ ಈಶ
ತೈಲ ಧಾರೆಯಂತೆ ಮನಸುಕೊಡು ಹರಿಯಲ್ಲಿ ಶಂಭೋ

ಅಹೋ ರಾತ್ರಿಯಲಿ ನಾನು ಅನುಚರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೊ ಮಹದೇವನೆ
ಅಹಿಭೂಷಣನೆ ಎನ್ನವಗುಣಗಳೆಣಿಸದಲೆ
ವಿಹಿತ ಧರ್ಮದಿ ಕೊಡು ವಿಷ್ಣುಭಕುತಿಯ ಶಂಭೋ ||1||

ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ
ಅನಲಾಕ್ಷ ನಿನ್ನ ಪ್ರೇರಣೆಯಲ್ಲದೆ
ದನುಜ ಗಜಮದ ಹರಿಯೆ ದಂಡ ಪ್ರಣಾಮವ ಮಾಳ್ಪೆ
ಮಣಿಸು ಈ ಮನವ ಸಜ್ಜನರ ಚರಣದಿ ಶಂಭೋ||2||

ಭಾಗೀರಥೀಧರನೆ ಭಯವ ಪರಿಹರಿಸೈಯ ಲೇ
ಸಾಗಿ ಒಲಿದು ಸಂತತ ಶರ್ವದೇವ
ಭಾಗವತ ಜನಪ್ರೀಯ ವಿಜಯವಿಠ್ಠಲನಂಘ್ರಿ
ಜಾಗುಮಾಡದೆ ಭಜಿಪ ಭಾಗ್ಯವನು ಕೊಡೋ ಶಂಭೋ||3||

Leave a Comment

Your email address will not be published. Required fields are marked *