ಕೆಳಗಿಳಿದು ಹರಿಯುವುದೆ ಜಲದ ನಿಜಗುಣವಯ್ಯ
ತಳೆಯುವುದು ಮಲಿನತೆಯ ಕೊಳೆನೆಲದಿ ಹರಿಯುತ್ತ|
ಜಲನಿಧಿಯ ಸೇರಿ ತಾ ಬಲು ಕ್ಷಾರವಾಗುತಲಿ
ಸಲಿಲಾರ್ಥಿ ಜನರಿಂಗೆ ಅನಲಸಮವಾಗುವುದು||
ಗಗನದಲ್ಲಿಹ ರವಿಯು ಜಗವನೆಲ್ಲವ ಬೆಳಗಿ
ಸಗರಜಲವನು ಕೂಡ ನಗುತ ಕರದಿಂದೆತ್ತಿ|
ವಿಗತದೋಷವ ಗೈದು ಮುಗಿಲರೂಪವ ಕೊಡುತ
ಜಗಕೆಲ್ಲ ಸವಿತರುವ ಮಿಗೆ ಸೊಗದ ಮಳೆಕರೆವ||
ಜಲದವೊಲು ಎಮ್ಮ ಮನ ಕೆಳಮೊಗವು ಚಂಚಲವು
ನಲಿನಲಿದು ಹರಿಯುವುದು ಮಲಿನಮಯ ವಿಷಯದೆಡೆ|
ಜಲಜಾಕ್ಷ ಕೃಪೆಯಿಂದ ಒಲಿದೆಮ್ಮ ಬಾಳ್ಗಳನು
ಜಲಮೂರ್ತಿ ಮೇಲೆತ್ತಿ ಸಲಹಯ್ಯ ಸ್ವಾಮಿ||
—ಸ್ವಾಮಿ ಶಾಸ್ತ್ರಾನಂದ