ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ|
ಕೃಷ್ಣ ಎನಬಾರದೆ||
ನರಜನ್ಮ ಬಂದಾಗ ನಾಲಿಗೆ ಇದ್ದಾಗ
ಕೃಷ್ಣ ಎನಬಾರದೆ||
ಮಲಗೆದ್ದು ಮೈಮುರಿದು ಏಳುತಲೊಮ್ಮೆ|
ಕೃಷ್ಣ ಎನಬಾರದೆ||
ಸುಳಿದಾಡುತ ಮನೆಯೊಳಗಾದರು ಒಮ್ಮೆ|
ಕೃಷ್ಣ ಎನಬಾರದೆ||
ಮೇರೆ ತಪ್ಪಿ ಮಾತನಾಡುವಾಗಲೊಮ್ಮೆ|
ಕೃಷ್ಣ ಎನಬಾರದೆ||
ದಾರಿಯ ನಡೆವಾಗ ಭಾರವ ಹೊರುವಾಗ|
ಕೃಷ್ಣ ಎನಬಾರದೆ||
ನೀಗದಾಲೋಚನೆ ರೋಗೋಪದ್ರದಲೊಮ್ಮೆ|
ಕೃಷ್ಣ ಎನಬಾರದೆ||
ಪರಿಪರಿ ಕೆಲಸದೊಳೊಂದು ಕೆಲಸವೆಂದು|
ಕೃಷ್ಣ ಎನಬಾರದೆ||
ದುರಿತ ರಾಶಿಗಳನು ತರಿದು ಬಿಸಾಡಲು|
ಕೃಷ್ಣ ಎನಬಾರದೆ||
ಗರುಡವಾಹನ ಸಿರಿ ಪುರಂದರವಿಟ್ಠಲನ್ನೆ|
ಕೃಷ್ಣ ಎನಬಾರದೆ||