ಕಲಿಯುಗದಲಿ ಹರಿನಾಮವ

ಕಲಿಯುಗದಲಿ ಹರಿನಾಮವ ನೆನೆದರೆ
ಕುಲಕೋಟಿಗಳುದ್ಧರಿಸುವವೋ ರಂಗಾ||

ಸುಲಭದ ಮುಕ್ತಿಗೆ ಸುಲಭನೆಂದೆನಿಸುವ
ಜಲರುಹನಾಭನ ನೆನೆ ಮನವೆ||

ಸ್ನಾನವನರಿಯೆನು ಮೌನವನರಿಯೆನು
ಧ್ಯಾನವನರಿಯೆನೆಂದೆನಬೇಡ|
ಜಾನಕಿವಲ್ಲಭ ದಶರಥನಂದನ
ಗಾನವಿನೋದನ ನೆನೆ ಮನವೆ||

ಅರ್ಚಿಸಲರಿಯೆನು ಮೆಚ್ಚಿಸಲರಿಯೆನು
ತುಚ್ಛನು ನಾನೆಂದೆನಬೇಡ|
ಅಚ್ಯುತಾನಂತ ಗೋವಿಂದ ಮುಕುಂದನ
ಇಚ್ಛೆಯಿಂದ ನೀ ನೆನೆ ಮನವೆ||

ಜಪವೊಂದರಿಯೆನು ತಪವೊಂದರಿಯೆನು
ಉಪದೇಶವಿಲ್ಲೆಂದೆನಬೇಡ|
ಅಪಾರ ಮಹಿಮ ಶ್ರೀ ಪುರಂದರವಿಟ್ಠಲನ
ಉಪಾಯದಿಂದಲಿ ನೆನೆ ಮನವೆ||

                                    —ಪುರಂದರದಾಸ

Leave a Comment

Your email address will not be published. Required fields are marked *