ಕರುಣಿಸೋ ರಂಗಾ

ಕರುಣಿಸೋ ರಂಗಾ ಕರುಣಿಸೋ
ಹಗಲು ಇರುಳೂ ನಿನ್ನ ಸ್ಮರಣೆ ಮರೆಯದಂತೆ||

ರುಕುಮಾಂಗದನಂತೆ ವ್ರತವ ನಾನರಿಯೆ
ಶುಕಮುನಿಯಂತೆ ಸ್ತುತಿಸಲರಿಯೆ|
ಬಕವೈರಿಯಂತೆ ಧ್ಯಾನ ಮಾಡಲರಿಯೆ
ದೇವಕಿಯಂತೆ ಮುದ್ದಿಸಲರಿಯೆನೋ||

ಗರುಡನಂದದಿ ಪೊತ್ತು ತಿರುಗಲು ಅರಿಯೆ
ಕರೆಯಲರಿಯೆನೋ ಕರಿರಾಜನಂತೆ|
ವರಕಪಿಯಂತೆ ದಾಸ್ಯ ಮಾಡಲರಿಯೆ
ಸಿರಿಯಂತೆ ಸುಖವಿತ್ತು ಸೇವಿಸಲರಿಯೆನೋ||

ಬಲಿಯಂತೆ ದಾನವ ಕೊಡಲಾರೆನೊ ಭಕ್ತಿ-
ಛಲವನರಿಯೆನೋ ಪ್ರಹ್ಲಾದನಂತೆ|
ಒಲಿಸಲರಿಯೆನೋ ಅರ್ಜುನನಂತೆ ಸಖನಾಗಿ
ಸಲಹೋ ದೇವರ ದೇವ ಪುರಂದರವಿಟ್ಠಲ||

                                                         —ಪುರಂದರದಾಸ

Leave a Comment

Your email address will not be published. Required fields are marked *