ಕರುಣಾಕರ ನೀನೆಂಬುವುದೇತಕೋ
ಭರವಸೆಯಿಲ್ಲೆನಗೆ||
ಪರಿಪರಿಯಲಿ ಈ ನರಜನ್ಮವನಿತ್ತು
ತಿರುಗಿ ತಿರುಗಿ ಮನಕರಗಿಸುವುದ ಕಂಡು||
ಕರಿ ಧ್ರುವ ಬಲಿ ಪಾಂಚಾಲಿ ಅಹಲ್ಯೆಯ
ಪೊರೆದವ ನೀನಂತೆ|
ಅರಿತು ವಿಚಾರಿಸಿ ನೋಡಲದೆಲ್ಲವು
ಪರಿಪರಿ ಕಂತೆಗಳಂತಿವೆ ಕೃಷ್ಣಾ||
ಕರುಣಾಕರ ನೀನಾದರೆ ಈಗಲೆ
ಕರಪಿಡಿದೆನ್ನನು ಹರಿ ಕಾಯೋ|
ಸರಸಿಜಾಕ್ಷನೆ ಸರಸ ನೀನಾದರೆ
ದುರಿತಗಳೆನ್ನನು ಬಾಧಿಪುದುಂಟೆ||
ಮರಣಕಾಲದಲಿ ಅಜಮಿಳಗೊಲಿದೆ
ಗರುಡಧ್ವಜನೆಂಬ ಬಿರುದಿನಿಂದ|
ವರಬಿರುದುಗಳು ಉಳಿಯಬೇಕಾದರೆ
ತ್ವರಿತದಿ ಕಾಯೋ ಪುರಂದರವಿಟ್ಠಲ||
—-ಪುರಂದರದಾಸ