ಕಂಗಳಿವ್ಯಾತಕೋ

ಕಂಗಳಿವ್ಯಾತಕೋ ಕಾವೇರಿರಂಗನ ನೋಡದ||

ಜಗಂಗಳೊಳಗೆ ಮಂಗಳಮೂರುತಿ
ರಂಗನ ಶ್ರೀಪಾದಂಗಳ ನೋಡದ||

ಎಂದಿಗಾದರೊಮ್ಮೆ ಜನರು
ಬಂದು ಭೂಮಿಯಲ್ಲಿ ನಿಂದು|
ಚಂದ್ರ ಪುಷ್ಕರಣಿ ಸ್ನಾನವ ಮಾಡಿ
ಆನಂದದಿಂದಲಿ ರಂಗನ ಕಾಣದ||

ಹರಿಪಾದೋದಕಸಮ ಕಾವೇರಿ
ವಿರಜಾ ನದಿಲಿ ಸ್ನಾನವ ಮಾಡಿ|
ಪರಮ ವೈಕುಂಠ ರಂಗ ಮಂದಿರ
ಪರವಾಸುದೇವನ ನೋಡದ||

ಹಾರ ಹೀರ ವೈಜಯಂತಿ
ತೋರ ಮುತ್ತಿನ ಹಾರ ಪದಕ|
ತೇರನೇರಿ ಬೀದಿಲಿ ಬರುವ
ರಂಗವಿಟ್ಠಲರಾಯನ ನೋಡದ||

                                —ಶ್ರೀಪಾದರಾಜಸ್ವಾಮಿ

Leave a Comment

Your email address will not be published. Required fields are marked *