ಒಪ್ಪುವ ವಿಭೂತಿಯ ನೊಸಲಲ್ಲಿ ಧರಿಸಿ,
ದೃಷ್ಟಿವಾ[ರಿ] ನಿಮ್ಮನೋಡಲೊಡನೆ
ಬೆಟ್ಟದಷ್ಟು ತಪ್ಪುಳ್ಳಡೆಯೂ ಮುಟ್ಟಲಮ್ಮವು ನೋಡಾ.
ದುರಿತ ಅನ್ಯಾಯವ ಪರಿಹರಿಸಬಲ್ಲಡೆ
‘ಓಂ ನಮಃ ಶಿವಾಯ’ ಶರಣೆಂಬುದೆ ಮಂತ್ರ.
ಅದೆಂತೆಂದಡೆ
‘ನಮಃ ಶಿವಾಯೇತಿ ಮಂತ್ರಂ ಯಃ ಕರೋತಿ ತ್ರಿಪುಂಡ್ರಕಂ
ಸಪ್ತಜನ್ಮಕೃತಂ ಪಾಪಂ ತತ್‍ಕ್ಷಣಾದೇವ ನಶ್ಯತ್ಬಿ’
ಇಂತೆಂದುದಾಗಿ,
ಸಿಂಹದ ಮರಿಯ ಸೀಳ್ನಾಯಿ ತಿಂಬಡೆ ಭಂಗವಿನ್ನಾರದೊ ಚೆನ್ನಮಲ್ಲಿಕಾರ್ಜುನಾ ?