ಏನು ಮಾಡಿದರೇನು

ಏನು ಮಾಡಿದರೇನು ಭವ ಹಿಂಗದು ಸ್ವಾಮಿ
ದಾನವಾಂತಕ ನಿನ್ನ ದಯವಾಗದನಕ||

ಅರುಣೋದಯದೊಳೆದ್ದು ಅತಿಸ್ನಾನಗಳ ಮಾಡಿ
ಬೆರಳೆಣಿಸಿದೆ ಅದರ ನಿಜವರಿಯದೆ|
ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೋ
ಹರಿ ನಿನ್ನ ಕರುಣಾಕಟಾಕ್ಷವಾಗದನಕ||

ಶ್ರುತಿ ಶಾಸ್ತ್ರ ಪುರಾಣಗಳನೋದಿ ಬೆಂಡಾದೆ
ಅತಿ ಶೀಲಗಳನೆಲ್ಲ ಮಾಡಿ ದಣಿದೆ|
ಗತಿಯ ಪಡೆಯುವೆನೆಂದು ಕಾಯ ದಂಡಿಸಿದೆನೋ
ರತಿಪತಿಪಿತ ನಿನ್ನ ದಯವಾಗದನಕ||

ಧ್ಯಾನವನು ಮಾಡಿದೆನು ಮೌನವನು ತಾಳಿದೆ ಮ-
ಹಾನು ಪುರುಷಾರ್ಥಕ್ಕೆ ಮನವನಿಕ್ಕಿ|
ಅನಾಥಬಂಧು ಶ್ರೀ ಪುರಂದರವಿಟ್ಠಲನ
ಧ್ಯಾನಿಸುವರೊಡಗೂಡಿ ನೆಲೆಗಾಣದನಕ||

                                                   —-ಪುರಂದರದಾಸ

Leave a Comment

Your email address will not be published. Required fields are marked *