ಏನು ಧನ್ಯಳೊ| ಲಕುಮಿ| ಎಂಥಾ ಮಾನ್ಯಳೋ||
ಸಾನುರಾಗದಿಂದ ಹರಿಯ
ತಾನೆ ಸೇವೆ ಮಾಡುತಿಹಳು||
ಕೋಟಿಕೋಟಿ ಭೃತ್ಯರಿರಲು
ಹಾಟಕಾಂಬರನ ಸೇವೆ|
ಸಾಟಿಯಿಲ್ಲದೆ ಮಾಡಿ ಪೂರ್ಣ
ನೋಟದಿಂದ ಸುಖಿಸುತಿಹಳು||
ಛತ್ರ ಚಾಮರ ವ್ಯಜನ ಪರ್ಯಂಕ
ಪಾತ್ರರೂಪದಲ್ಲಿ ನಿಂತು
ಚಿತ್ರಚರಿತನಾದ ಹರಿಯ
ನಿತ್ಯಸೇವೆ ಮಾಡುತಿಹಳು||
ಸರ್ವತ್ರದಿ ವ್ಯಾಪ್ತನಾದ
ಸರ್ವದೋಷರಹಿತನಾದ
ಶರ್ವವಂದ್ಯನಾದ ಪುರಂದರ
ವಿಟ್ಠಲನ್ನ ಸೇವಿಸುವಳು||
—-ಪುರಂದರದಾಸ