ಎಲ್ಲವೂ ನಿನ್ನಚ್ಛೆಯಂತೆ ನಡೆದಿರಲು
ನೀನೆ ಭವಸಾಗರವ ದಾಟಿಸುವ ಹಡಗು|
ನಿನ್ನ ಇಚ್ಛೆಯ ನೀನು ಪೂರೈಸುತಿರಲು
ತಮ್ಮ ಗೈಮೆಯಿದೆಂದು ತಿಳಿವರೀ ಜನರು ||
ಕೆಸರಿನಲಿ ಸಲಗವನು ಹಿಡಿಯುವಳು ನೀನು
ಹೆಳವನನು ಗಿರಿಯ ತುದಿಗೊಯ್ಯುವಳು ನೀನು|
ಹಲವರಿಗೆ ಬ್ರಹ್ಮಪದವಿತ್ತು ಹಲವರನು
ಭವಜಲಧಿ ಸುಳಿಯೊಳಗೆ ಎಸೆಯುವಳು ನೀನು||
ನೀನು ಚಾಲಕಶಕ್ತಿ ನಾನೊಂದು ಯಂತ್ರ
ನಾನೊಂದು ಬರಿಯ ಮನೆ ನೀನದರ ಮಂತ್ರ|
ನಾನೊಂದು ರಥವಾಗೆ ನೀನದರ ರಥಿಕ
ನೀ ನಡೆಸೆ ನಾ ನಡೆವೆ ನಿನ್ನದೀ ಲೋಕ||
——ವಚನವೇದ