ಎನಗೂ ಆಣೆ ರಂಗ ನಿನಗೂ ಆಣೆ|
ಎನಗೂ ನಿನಗೂ ಇಬ್ಬರಿಗೂ ನಿನ್ನ ಭಕ್ತರಿಗೂ ನಿನ್ನ ಭಕ್ತರಾಣೆ||
ನಿನ್ನ ಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ| ರಂಗ
ಎನ್ನ ನೀ ಕೈಬಿಟ್ಟು ಪೋದರೆ ನಿನಗೆ ಆಣೆ||
ತನುಮನಧನದಲಿ ವಂಚಕನಾದರೆ ಎನಗೆ ಆಣೆ |ರಂಗ
ಮನಸು ನಿನ್ನಲಿ ನಿಲಿಸದಿದ್ದರೆ ನಿನಗೆ ಆಣೆ ||
ಕಾಕು ಮನುಜರ ಸಂಗ ಮಾಡಿದರೆನಗೆ ಆಣೆ| ರಂಗ
ಲೌಕಿಕವ ಬಿದಿಸದಿದ್ದರೆ ನಿನಗೆ ಆಣೆ||
ಶಿಷ್ಟರ ಸಂಗವ ಮಾಡದಿದ್ದರೆ ಎನಗೆ ಆಣೆ| ರಂಗ
ದುಷ್ಟರ ಸಂಗವ ಬಿಡಿಸದಿದ್ದರೆ ನಿನಗೆ ಆಣೆ||
ಹರಿ ನಿನ್ನಾಶ್ರಯ ಮಾಡದಿದ್ದರೆ ಎನಗೆ ಆಣೆ| ರಂಗ
ಪುರಂದರವಿಟ್ಠಲ ನೀನೊಲಿಯದಿದ್ದರೆ ನಿನಗೆ ಆಣೆ||
—-ಪುರಂದರದಾಸ