ಉಬ್ಬದಿರು ಉಬ್ಬದಿರು

ಉಬ್ಬದಿರು ಉಬ್ಬದಿರು ಎಲೆ ಮಾನವ |
ಹೆಬ್ಬುಲಿಯಂತೆ ಯಮ ಬೊಬ್ಬಿಡುತ ಕಾದಿರುವ||

ಸಾಗರದ ತೆರೆಯಂತೆ ಸಾವು ಹುಟ್ಟಿರಲಾಗಿ
ಭೋಗಭಾಗ್ಯಗಳೆಂದು ಬಳಲಲೇಕೋ|
ನಾಗಹೆಡೆ ನೆರಳಲ್ಲಿ ನಡುಗೋ ಕಪ್ಪೆಯ ತೆರದಿ
ಕೂಗಿ ಚೀರಿದರೆ ನಿನ್ನಾಗ ಕೇಳುವರೆ||

ಮಾಳಿಗೆ ಮನೆಯೆಂದು ಮತ್ತೆ ಸತಿಸುತರೆಂದು
ಜಾಳಿಗೆ ಧನಧಾನ್ಯ ಪಶುಗಳೆಂದು|
ವೇಳೆ ತಪ್ಪದೆ ತಿಂಬ ಕೂಳು ತನಗುಂಟೆಂದು
ಗಾಳಿಗೊಡ್ಡಿದ ದೀಪ ಬದುಕು ಬಯಲು ||

ಅಸ್ಧಿರದ ಭವದೊಳಗೆ ಅತಿಶಯಗಳಣಿಸದಲೆ
ವಸ್ತು ಇದರಲಿ ಕೇಳು ವೈರಾಗ್ಯವ|
ವಿಸ್ತಾರ ಮಹಿಮ ಶ್ರೀ ಪುರಂದರವಿಟ್ಠಲನ
ಸ್ವಸ್ಥಚಿತ್ತದಿ ನೆನೆದು ಮುಕ್ತಿ ಪಡೆ ಮನುಜ||

                                            —-ಪುರಂದರದಾಸರು

Leave a Comment

Your email address will not be published. Required fields are marked *